ಭ್ರಷ್ಟಾಚಾರದ ಆರೋಪ ಸತ್ಯಕ್ಕೆ ದೂರವಾದ ಮಾತು: ಉಳ್ಳಾಲ ನಗರಸಭೆ ಉಪಾಧ್ಯಕ್ಷ ಆಯೂಬ್ ಮಂಚಿಲ

ಉಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ಭೃಷ್ಟಾಚಾರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ನಗರಸಭೆಯ ಆಡಳಿತವು ಎಲ್ಲಾ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನುದಾನವನ್ನು ಬಿಡುಗಡೆ ಮಾಡಿದೆ. ಕಳೆದ ಎರಡೂವರೆ ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮತ್ತು ಜನಮುಖಿ ಕಾರ್ಯಗಳನ್ನು ನಗರಸಭೆಯ ಆಡಳಿತ ನಡೆಸಿದ್ದು, ಪೌರಾಯುಕ್ತರ ಸಹಕಾರದಿಂದ ಉಳ್ಳಾಲದ ಸಮಗ್ರ ಅಭಿವೃದ್ಧಿಗೆ ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ ಎಂದು ಉಳ್ಳಾಲ ನಗರಸಭಾ ಉಪಾಧ್ಯಕ್ಷ ಆಯೂಬ್ ಮಂಚಿಲ ತಿಳಿಸಿದರು.
ಉಳ್ಳಾಲ ಪ್ರೆಸ್ ಕ್ಲಬ್‍ನಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಜೆಟ್ ಮಂಡನೆ ಸಂದರ್ಭದಲ್ಲಿ ಎರಡು ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ತಟಸ್ಥವಾಗಿತ್ತು. ಇದನ್ನೇ ದೊಡ್ಡ ವಿಚಾರವಾಗಿ ಮಾಡಿ ಗದ್ದಲ ಮಾಡಿದ್ದಾರೆ. ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಅನುದಾನ ಇಡುವ ನಿಟ್ಟಿನಲ್ಲಿ ಆರಂಭದಲ್ಲಿ ಜೆಡಿಎಸ್‍ನ ಸದಸ್ಯ ದಿನಕರ ಉಳ್ಳಾಲ್ ಆಡಳಿತ ಪಕ್ಷವನ್ನು ಶ್ಲಾಘಿಸಿ ಬಳಿಕ ಅವರೇ ಗದ್ದಲ ಮಾಡಿ ಬಜೆಟ್‍ಗೆ ವಿರೋಧ ವ್ಯಕ್ತಪಡಿಸಿರುವುದು ಖೇದಕರ ಎಂದರು.
ಅನುದಾನದಲ್ಲಿ ತಾರತಮ್ಯ ಮಾಡಿಲ್ಲ : ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಮಾಹಿತಿ ನೀಡಿ, ನಗರಸಭೆಯ 15ನೇ ಹಣಕಾಸು ಯೋಜನೆಯಡಿ ಎಲ್ಲಾ ವಾರ್ಡ್‍ಗಳಿಗೂ ಅನುದಾನ ಬಿಡುಗಡೆ ಮಾಡಿದ್ದು, ಹಿಂದೆ ತಲಾ ಏಳು ಲಕ್ಷ ರೂ, ನಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಎರಡು ಮೂರು ವಾರ್ಡ್ ಗಳಲ್ಲಿ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಭವಾಗಿತ್ತು. ಅದನ್ನು ಮುಂದಿನ ಹತ್ತು ದಿನಗಳಲ್ಲಿ ಸರಿಪಡಿಸಲಾಗುವುದು. ಇದೀಗ ಎಲ್ಲಾ ವಾರ್ಡ್ ಗಳಿಗೆ ತಲಾ ಎರಡು ಲಕ್ಷದಂತೆ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ಆರಂಭವಾಗಲಿದೆ. ಕಳೆದ ಎರಡೂವರೆ ವರ್ಷದಲ್ಲಿ ಮಳೆಗಾಲ ಮತ್ತ ಬೇಸಿಗೆ ಕಾಲದಲ್ಲಿ ಜನರ ಸಮಸ್ಯೆಗೆ ಆಡಳಿತ ಪಕ್ಷ ಸ್ಪಂದಿಸಿದ್ದು, ಇಲ್ಲಿ ಜನರ ಸಮಸ್ಯೆಗಿಂದ ಹೆಚ್ಚು ವಿರೋಧ ಪಕ್ಷದ ಕೌನ್ಸಿಲರ್ ಗಳೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವೀಣಾ ಡಿ.ಸೋಜಾ, ಸದಸ್ಯರಾದ ಬಾಝಿಲ್ ಡಿ.ಸೋಜ, ಯು.ಎ. ಇಬ್ರಾಹಿಂ, ಶಶಿಕಲಾ ಚೆಂಬುಗುಡ್ಡೆ ಉಪಸ್ಥಿತರಿದ್ದರು.







