ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಇಳಿಸಿ ಬಿಎಸ್ ವೈಗೆ ಅಧಿಕಾರ ನೀಡಲಿ: ಡಿ.ಕೆ.ಶಿವಕುಮಾರ್
''ಯಡಿಯೂರಪ್ಪಗೆ ಮೋದಿ ತೋರಿದ ನಮ್ರತೆ ಇಷ್ಟು ದಿನ ಎಲ್ಲಿ ಹೋಗಿತ್ತು?''

ಬೆಂಗಳೂರು, ಫೆ, 28: ‘ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತೋರಿದ ನಮ್ರತೆ ಇಷ್ಟು ದಿನ ಎಲ್ಲಿ ಹೋಗಿತ್ತು? ಅವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ ಎಂಬುದರ ಬಗ್ಗೆ ಮೋದಿ ಸ್ಪಷ್ಟನೆ ನೀಡಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಮಂಗಳವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮೋದಿ ದೇಶದ ಪ್ರಧಾನಿ, ಅವರನ್ನು ನಾವು ಗೌರವಿಸುತ್ತೇವೆ. ಆದರೆ, ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪರಿಗೆ ಕೊಟ್ಟ ನೋವು, ವಿಧಾನಸೌಧದಿಂದ ರಾಜ್ಯಪಾಲರ ಮನೆಯ ವರೆಗೂ ಕಣ್ಣೀರು ಹಾಕಿಕೊಂಡು ಹೋಗಿ ರಾಜೀನಾಮೆ ನೀಡಿದ್ದರ ಬಗ್ಗೆ ಮೋದಿ ಮಾತನಾಡಬೇಕು’ ಎಂದು ಒತ್ತಾಯಿಸಿದರು.
ಯಡಿಯೂರಪ್ಪ, ಅವರ ಕುಟುಂಬ ಸದಸ್ಯರು, ಆಪ್ತರ ಮೇಲೆ ಇಡಿ ದಾಳಿ ನೋಟೀಸ್ ನೀಡಿರುವ ಬಗ್ಗೆ, ಅವರನ್ನು ತನಿಖಾಧಿಕಾರಿಗಳು ಎಷ್ಟು ಬಾರಿ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಮೋದಿ ಅವರು ವಿವರಣೆ ನೀಡಬೇಕು. ಬಿಎಸ್‍ವೈ ನಾಯಕತ್ವದಲ್ಲಿ ಚುನಾವಣೆ ನಡೆಸಿ 104 ಸೀಟು ಪಡೆದ ನಂತರ ಅಧಿಕಾರದಿಂದ ಯಾಕೆ ಇಳಿಸಿದರು? ಚುನಾವಣೆ ಮಾಡಲು ಅವರು ಬೇಕಾಗಿತ್ತು, ಆಪರೇಷನ್ ಕಮಲ ಮಾಡಲು ಅವರು ಬೇಕಾಗಿತ್ತು, ಆದರೆ ಅಧಿಕಾರವನ್ನು ಯಾಕೆ ಕಸಿದುಕೊಂಡರು?’ ಎಂದು ಅವರು ಕೇಳಿದರು.
‘ಬಿಎಸ್‍ವೈ ಅವರನ್ನು ನಾಯಕತ್ವದಿಂದ ತೆಗೆದ ನಂತರ ಪಕ್ಷಕ್ಕೆ ಅಭದ್ರತೆ ಎದುರಾಗಿದೆ. ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬ ಮಾಡಲು ಮುಂದಾದಾಗ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಅವರ ಕಾಲದಲ್ಲಿ ಮಾಡಿದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದಾರೆ ಸಂತೋಷ. ಆದರೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪರಿಗೆ ತೋರಿದ ನಮ್ರತೆ ಇಷ್ಟು ದಿನ ಎಲ್ಲಿಗೆ ಹೋಗಿತ್ತು?’ ಎಂದು ಶಿವಕುಮಾರ್ ಪುನರುಚ್ಚರಿಸಿದರು.
‘ಯಡಿಯೂರಪ್ಪ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂದು ಅಧಿಕೃತವಾಗಿ ಘೋಷಿಸಿ, ಅವರಿಗೆ ಜವಾಬ್ದಾರಿ ನೀಡಲಿ. ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಇಳಿಸಿ ಯಡಿಯೂರಪ್ಪರಿಗೆ ಅಧಿಕಾರ ನೀಡಲಿ. ಆಗ ಅವರ ನಮ್ರತೆಯನ್ನು ಜನ ನಂಬುತ್ತಾರೆ. ಅದನ್ನು ಬಿಟ್ಟು ರಾಜಕಾರಣದಲ್ಲಿ ನಾಟಕೀಯ ಸಿಂಪತಿಯನ್ನು ಜನ ಒಪ್ಪುವುದಿಲ್ಲ’ ಎಂದು ಅವರು ತಿರುಗೇಟು ನೀಡಿದರು.
‘ನಾನು ವಿರೇಂದ್ರ ಪಾಟೀಲ್, ನಿಜಲಿಂಗಪ್ಪರ ಕಾಲದಲ್ಲಿ ಶಾಸಕನಾಗಿದ್ದೆ. ವೀರೇಂದ್ರ ಪಾಟೀಲ್‍ರ ಆರೋಗ್ಯ ಏನಾಗಿತ್ತು ಎಂದು ನನಗೆ ಗೊತ್ತಿದೆ. ನಾನು ರಾಜೀವ್ ಗಾಂಧಿ ಜತೆ ಆಸ್ಪತ್ರೆಗೆ ಹೋಗಿದ್ದೆ. ಅವರ ಆರೋಗ್ಯ ಪರಿಸ್ಥಿತಿ ವಿಚಾರಿಸಿದರು. ಅವರು ಚೇತರಿಸಿಕೊಳ್ಳುವ ಸ್ಥಿತಿ ಇರಲಿಲ್ಲ. ಹೀಗಾಗಿ ಚರ್ಚೆ ಮಾಡಿ, ವಿರೇಂದ್ರ ಪಾಟೀಲ್‍ರನ್ನು ಬದಲಿಸುವ ತೀರ್ಮಾನ ಮಾಡಲಾಯಿತು. ನಾವು ಬಿಜೆಪಿಯವರಂತೆ ನಾಟಕೀಯ ಸಿಂಪತಿ ವ್ಯಕ್ತ ಪಡಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನಾನು ಜಾತಿ ಆಧಾರದ ಮೇಲೆ ಹೇಳಿಕೆ ನೀಡುವುದಿಲ್ಲ. ಯಾವ ಮತದಾರನೂ ದಡ್ಡನಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ತೀರ್ಮಾನ ಕೈಗೊಳ್ಳಲಿದ್ದಾರೆ. ಬಿಜೆಪಿ ಎಷ್ಟು ನಾಯಕರನ್ನು ಬಳಸಿ ಬಿಸಾಡಿದೆ ಎಂಬುದು ಜನರಿಗೆ ಗೊತ್ತಿದೆ. ಈಗ ಆ ಬಗ್ಗೆ ಮಾತನಾಡುವುದಿಲ್ಲ’ ಎಂದ ಅವರು, ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಮೋದಿ ಅವರು ಶೇ.40 ಕಮಿಷನ್ ದೂರು ನೀಡಿದ ಕೆಂಪಣ್ಣ ಅವರಿಗೆ ಯಾಕೆ ಉತ್ತರ ನೀಡುತ್ತಿಲ್ಲ? ಪಿಎಸ್ಸೈ ಹಗರಣ, ನೇಮಕಾತಿ ಅಕ್ರಮ ಯಾರಿಂದ ಆಗುತ್ತಿದೆ?’ ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರ ರಾಜ್ಯವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿದೆ. ದೇಶದಲ್ಲಿ ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದೆ. ಈ ಬಗ್ಗೆ ಅವರು ಮಾತನಾಡುತ್ತಿಲ್ಲ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದರು. ಆದರೆ, ಶಿವಮೊಗ್ಗಕ್ಕೆ ಬಂಡವಾಳ ಹೂಡಿಕೆ ಮಾಡಲು ಯಾರೂ ಬರುತ್ತಿಲ್ಲ ಎಂದು ಯಾಕೆ ಹೇಳುತ್ತಿಲ್ಲ? ಈ ಬಗ್ಗೆ ಪ್ರಧಾನಿ, ಅಮಿತ್ ಶಾ ಯಾಕೆ ಮಾತನಾಡುತ್ತಿಲ್ಲ. ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್ ಪೋಸ್ಟರ್ ವಿಚಾರವಾಗಿ ಸಿಎಂ ಯಾಕೆ ಮಾತನಾಡುತ್ತಿಲ್ಲ? ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎಂದವರು ಈಗ ಪ್ರಧಾನಿ ನೇತೃತ್ವದಲ್ಲಿ ಚುನಾವಣೆ ಎಂದು ಹೇಳುತ್ತಿರುವುದು ಯಾಕೆ? ಬಿಜೆಪಿ ಮುಕ್ತ ಕರ್ನಾಟಕ ನಿರ್ಮಾಣದ ದಿನಗಳು ಸನಿಹದಲ್ಲಿದೆ’ ಎಂದು ಅವರು ನುಡಿದರು.
‘ಸಮಯ ಬಂದಾಗ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರು ರಾಜ್ಯಕ್ಕೆ ಬರುತ್ತಾರೆ. ಯಾರು ಯಾವಾಗ ಬರಬೇಕು ಎಂದು ತೀರ್ಮಾನಿಸಿದ ನಂತರ ಬರುತ್ತಾರೆ. ನಾವು ನಮ್ಮದೇ ಆದ ರೀತಿಯಲ್ಲಿ ಅವರನ್ನು ಕರೆಸಿ ಪ್ರಚಾರ ಸಭೆ ಮಾಡಿಸುತ್ತೇವೆ. ಅನೇಕ ಮಾಜಿ ಮಂತ್ರಿಗಳು, ಕೇಂದ್ರ ನಾಯಕರು ಪ್ರತಿ ಜಿಲ್ಲೆಗೂ ಬಂದು ಕೆಲಸ ಮಾಡುತ್ತಿದ್ದಾರೆ’
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ







