ಕಾಂಗ್ರೆಸ್‌ನ ಭದ್ರಕೋಟೆಯಲ್ಲೂ ಕಗ್ಗಂಟಾಗಲಿದೆಯೇ ಶಾಮನೂರು ಗೆಲುವು?
ದಿ ಬಿಗ್ ಫೈಟ್

ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕವಾಗಿರುವಲ್ಲಿ ಈ ಸಲ ಯಾರಿಗೆ ಬಲ? ಶಾಮನೂರು ಪಾಲಿಗೆ ಕಗ್ಗಂಟಾಗಲಿದೆಯೇ ಮುಸ್ಲಿಮ್ ಸಮುದಾಯದ ಮುನಿಸು? ಗೆಲ್ಲಲೇಬೇಕೆಂಬ ಹಠದಲ್ಲಿರುವ ಬಿಜೆಪಿ ಹೆಣೆಯುತ್ತಿರುವ ರಣತಂತ್ರಗಳು ಏನು? ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕೈ, ಕಮಲದ ಜೊತೆ ಬೇರೆ ಯಾರ ಪೈಪೋಟಿ?
ವಿಧಾನಸಭಾ ಕ್ಷೇತ್ರ ದಾವಣಗೆರೆ-ದಕ್ಷಿಣ:
ಕಾಂಗ್ರೆಸ್ ಭದ್ರಕೋಟೆಯಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವೀಗ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪ್ರತಿಬಾರಿ ಅನಾಯಾಸವಾಗಿ ಗೆಲುವು ಸಾಧಿಸುತ್ತಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಗೆಲುವಿಗಾಗಿ ಭಾರೀ ಕಸರತ್ತು ನಡೆಸಬೇಕಾದ ಸ್ಥಿತಿ ತಲೆದೋರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಪ್ರತೀ ಬಾರಿಯೂ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡುತ್ತಿದ್ದು, ಮುಸ್ಲಿಮ್ ಮತದಾರರೇ ಇಲ್ಲಿ ನಿರ್ಣಾಯಕ.
ಶಾಮನೂರು ಮತ್ತೊಮ್ಮೆ ಆಕಾಂಕ್ಷಿ
ದಾವಣಗೆರೆ-ಚಿತ್ರದುರ್ಗ ಅವಿಭಜಿತ ಜಿಲ್ಲೆಯಾಗಿದ್ದಾಗ ೧೯೯೪ರಲ್ಲಿ ಒಮ್ಮೆ ಮತ್ತು ದಾವಣಗೆರೆ ಪ್ರತ್ಯೇಕ ಜಿಲ್ಲೆಯಾದ ಬಳಿಕ ಮೂರು ಬಾರಿ ಶಾಮನೂರು ಶಿವಶಂಕರಪ್ಪಗೆಲುವು ಸಾಧಿಸಿದ್ದಾರೆ.
೨೦೦೮ರಲ್ಲಿ ದಾವಣಗೆರೆ ಕ್ಷೇತ್ರ ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಾಗಿ ಪುನರ್ ವಿಂಗಡಣೆ ಆಯಿತು. ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಒಮ್ಮೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿಯೂ ಸ್ಪರ್ಧಿಸಲು ಈಗಾಗಲೇ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಶಾಸಕರಿಗೆ ಟಿಕೆಟ್ ಕಡ್ಡಾಯ ಎಂಬ ಮಾತನ್ನು ವರಿಷ್ಠರು ಹೇಳಿದ್ದು, ಶಾಮನೂರು ಅವರಿಗೆ ಟಿಕೆಟ್ ನೀಡುವುದು ಖಾತ್ರಿಯಿದೆ.
ಟಿಕೆಟ್ ಕೇಳುತ್ತಿರುವ ಮುಸ್ಲಿಮ್ ಸಮುದಾಯ
ಪ್ರತೀ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಅವರಿಗೆ ಹೈಕಮಾಂಡ್ ಮಣೆ ಹಾಕುತ್ತಿದೆ. ಆದರೆ, ಈ ಬಾರಿ ಮುಸ್ಲಿಮ್ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂಬ ಕೂಗು ಹೆಚ್ಚಾಗಿದೆ. ದಕ್ಷಿಣ ಕ್ಷೇತ್ರದಲ್ಲಿ ಒಂದು ಬಾರಿಯಾದರೂ ಅವಕಾಶ ಕೊಡಿ ಎಂದು ವರಿಷ್ಠರ ಮುಂದೆ ಮುಸ್ಲಿಮ್ ಸಮುದಾಯ ಮನವಿ ಮಾಡಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರು ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಈಗಾಗಲೇ ಎಲ್ಲಾ ಪಕ್ಷಗಳು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂಬ ಉದ್ದೇಶದಲ್ಲಿವೆ. ಜೆಡಿಎಸ್ ಅಭ್ಯರ್ಥಿಯಾಗಿ ಅಲ್ಪಸಂಖ್ಯಾತ ಸಮುದಾಯದವರ ಹೆಸರು ಘೋಷಣೆಯಾಗಿದೆ.
ಒಂದು ವೇಳೆ ಇತರ ಪಕ್ಷಗಳು ಕಣಕ್ಕಿಳಿಸುವ ಮುಸ್ಲಿಮ್ ಅಭ್ಯರ್ಥಿಗಳೇ ಅಂತಿಮ ಕಣದಲ್ಲಿ ಉಳಿದರೆ ಮತಗಳು ವಿಭಜನೆಯಾಗಿ ಕೈಗೆ ಕಂಟಕವಾಗುವ ಸಾಧ್ಯತೆ ಹೆಚ್ಚಾಗಿದೆ. ೨೦೧೮ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ೧೫,೮೮೪ ಸಾವಿರ ಮತಗಳ ಅಂತರದಿಂದಷ್ಟೇ ಗೆಲುವು ಸಾಧಿಸಿತ್ತು. ಜೆಡಿಎಸ್‌ನ ಅಮಾನುಲ್ಲಾ ಖಾನ್ ೬,೦೦೦ ಮತ ಪಡೆದಿದ್ದರು. ಸಣ್ಣಪುಟ್ಟ ಪಕ್ಷಗಳು ಸಹ ಮತ ಪಡೆದಿದ್ದವು. ಕಾಂಗ್ರೆಸ್ ಪಕ್ಷದ ಮತಗಳು ಇತರ ಅಭ್ಯರ್ಥಿಗಳ ನಡುವೆ ಹಂಚಿಹೋಗಿದ್ದರಿಂದ ಗೆಲ್ಲಲು ಕಾಂಗ್ರೆಸ್ ಹರಸಾಹಸ ಪಡಬೇಕಾಯಿತು. ಈ ಬಾರಿಯೂ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಅಲ್ಪಸಂಖ್ಯಾತ ಸಮುದಾಯ, ತನ್ನ ಇದೇ ನಿರ್ಣಯಕ್ಕೆ ಅಂಟಿಕೊಂಡರೆ ಕೈಗೆ ಕಗ್ಗಂಟಾಗಲಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಈಗಾಗಲೇ ಈ ಆಕಾಂಕ್ಷಿಗಳು ವರಿಷ್ಠರ ಕದ ತಟ್ಟುವ ಪ್ರಯತ್ನ ನಡೆಸಿದ್ದು, ತೆರೆಮರೆಯಲ್ಲಿ ಆಟ ಸಾಗಿದೆ.
ಕಾಂಗ್ರೆಸ್‌ನಿಂದ ಅರ್ಜಿ ಸಲ್ಲಿಸಿದವರು:
ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ತಂಝೀಮ್ ಸಂಸ್ಥೆಯ ಮಾಜಿ ಅಧ್ಯಕ್ಷ ಸಾದಿಕ್ ಪೈಲ್ವಾನ್, ಇಬ್ರಾಹೀಂ ಕಲೀಮುಲ್ಲಾ, ಕಾಂಗ್ರೆಸ್ ಮುಖಂಡ ಸೈಫುಲ್ಲಾ ಪುತ್ರ ಸೈಯದ್ ಖಾಲಿದ್, ಇಕ್ಬಾಲ್ ಮುಹಮ್ಮದ್.
ಬಿಜೆಪಿಯಿಂದ ಆಕಾಂಕ್ಷಿಗಳು: ಯಶವಂತರಾವ್ ಜಾಧವ್, ಬಿ.ಜಿ.ಅಜಯ ಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಕೊಳೆನಹಳ್ಳಿ ಸತೀಶ್, ಆನಂದಪ್ಪ.
ಜೆಡಿಎಸ್ ಅಭ್ಯರ್ಥಿಯಾಗಿ ಜೆ.ಅಮಾನುಲ್ಲಾ ಖಾನ್ ಅವರ ಹೆಸರು ಘೋಷಣೆಯಾಗಿದೆ. ಎಸ್‌ಡಿಪಿಐ ಕೂಡ ಇಸ್ಮಾಜೀಲ್ ಜಬೀವುಲ್ಲಾ ಅವರ ಹೆಸರು ಘೋಷಿಸಿದೆ. ಕಣಕ್ಕಿಳಿಯಲಿರುವ ಇತರ ಪಕ್ಷಗಳೆಂದರೆ, ಎಎಪಿ, ಎಐಎಂಐಎಂ, ಡಬ್ಲ್ಯುಪಿಐ, ಬಿಎಸ್ಪಿ.ಇವುಗಳಲ್ಲಿ ಆಪ್ ಕೂಡ ಮುಸ್ಲಿಮ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದೆ ಎನ್ನಲಾಗುತ್ತಿದೆ.
ಗೆಲ್ಲಲು ಬಿಜೆಪಿ ಅವಿರತ ಶ್ರಮ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಏನೇ ಆದರೂ ಗೆಲುವು ಸಾಧಿಸಲೇಬೇಕು ಎನ್ನುವ ಹಠದಲ್ಲಿರುವ ಬಿಜೆಪಿ ಪ್ರತೀ ಬಾರಿಯೂ ಹೋರಾಟ ನಡೆಸುತ್ತಲೇ ಬಂದಿದೆ. ಪ್ರಧಾನಿ ಸೇರಿದಂತೆ ಘಟಾನುಘಟಿ ನಾಯಕರು ದಾವಣಗೆರೆಗೆ ಬಂದು ಹೋದರೂ ಇಲ್ಲಿ ಬಿಜೆಪಿ ಅರಳಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಗೆಲ್ಲಲ್ಲೇಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತಿದೆ.
ಕ್ಷೇತ್ರದಲ್ಲಿ ಗಂಭೀರ ಸಮಸ್ಯೆಗಳು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಿಂದುಳಿದ ವರ್ಗಗಳ ಕ್ಷೇತ್ರವಾಗಿದ್ದು, ಇಲ್ಲಿ ಹಲವಾರು ಜಲ್ವಂತ ಸಮಸ್ಯೆಗಳು ಇನ್ನೂ ಜೀವಂತ. ಪ್ರಮುಖವಾಗಿ ಸಾರ್ವಜನಿಕ ಆಸ್ಪತ್ರೆ, ಸರಕಾರಿ ಕಚೇರಿಗಳು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಶುದ್ಧ ಕುಡಿಯುವ ನೀರು, ಹೆಗಡೆ ನಗರದ ಸಮಸ್ಯೆ, ಸುಸಜ್ಜಿತ ರಸ್ತೆ, ಸುಸಜ್ಜಿತ ಚರಂಡಿಗಳು ಇಲ್ಲದಿರುವುದು, ಮಂಡಕ್ಕಿ ಭಟ್ಟಿಗಳಿಗೆ ಆಧುನಿಕತೆ ಸ್ಪರ್ಶ ಇಲ್ಲದೇ ಇರುವುದು, ಮಂಡಕ್ಕಿ ಭಟ್ಟಿ ಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ವಸತಿ ಸೌಲಭ್ಯ ನೀಡುವಲ್ಲಿ ನಿರ್ಲಕ್ಷ್ಯ, ಸುಸಜ್ಜಿತ ಕ್ರೀಡಾಂಗಣದ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಇನ್ನೂ ಹಾಗೇ ಇವೆ.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕೂಡ ಕೊಂಚ ಮಟ್ಟಿಗೆ ಆಗಿವೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಉತ್ತಮವಾದ ರಿಂಗ್ ರಸ್ತೆ, ಮೇಲ್ಸೇತುವೆ, ಒಳಚರಂಡಿ, ಶಾಲೆ, ಸಮುದಾಯ ಭವನ ಸೇರಿದಂತೆ ಅಭಿವೃದ್ಧಿ ಕಾರ್ಯಗಳು ನಡೆದಿವೆ.
ಚುನಾವಣೆ ಹೊತ್ತಲ್ಲಿ ಅಭಿವೃದ್ಧಿಯ ವಿಚಾರ ಬದಿಗೆ ಸರಿದು, ಜಾತಿಬಲ ಮತ್ತು ವರ್ಚಸ್ಸೇ ಮುಖ್ಯವಾಗುವುದು ಅನಿರೀಕ್ಷಿತವಲ್ಲ. ಒಟ್ಟಾರೆ ಈ ಬಾರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಸೆಣಸಾಟ ಜನರ ಊಹೆಗೂ ನಿಲುಕದ ರೀತಿಯಲ್ಲಿ ಏರ್ಪಡಲಿದೆ ಎನ್ನುವಂಥ ವಾತಾವರಣವಿರುವುದು ಸ್ಪಷ್ಟ.
ಶಾಮನೂರು ಶಿವಶಂಕರಪ್ಪ
ವಯಸ್ಸು ೯೧ ವರ್ಷ. ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ. ದಾವಣಗೆರೆ ಕಾಂಗ್ರೆಸ್‌ಗೆ ಶಾಮನೂರು ಅವರೇ ಹೈಕಮಾಂಡ್ ಎಂಬ ಮಾತೂ ಜನಜನಿತ. ಅಷ್ಟರ ಮಟ್ಟಿಗೆ ಪಕ್ಷದ ಮೇಲೆ ಅವರ ಕುಟುಂಬದ ಹಿಡಿತವಿದೆ. ಎಪ್ಪತ್ತರ ದಶಕದಲ್ಲೇ ರಾಜಕೀಯ ಪ್ರವೇಶಿಸಿದ್ದರೂ, ಕೆಪಿಸಿಸಿಯಲ್ಲಿ ಖಜಾಂಚಿಯಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದರೂ, ಸಚಿವರಾದದ್ದು ೨೦೧೩ರಲ್ಲಿ. ಅದೂ ಅತ್ಯಲ್ಪಅವಧಿಗೆ. ಪಕ್ಷದಲ್ಲಿ ಸೋನಿಯಾರಿಂದ ಹಿಡಿದು ಸಿದ್ದರಾಮಯ್ಯವರೆಗೆ ಎಲ್ಲರೊಡನೆಯೂ ಉತ್ತಮ ಬಾಂಧವ್ಯ ಹೊಂದಿರುವಂತೆಯೇ, ಇತರ ಪಕ್ಷಗಳ ನಾಯಕರೊಡನೆಯೂ ಅಷ್ಟೇ ಒಳ್ಳೆಯ ಸ್ನೇಹ ಇಟ್ಟುಕೊಂಡವರು. ಸತತ ಎರಡು ಬಾರಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದವರು. ಈಗ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಮತ್ತೊಮ್ಮೆ ಆಕಾಂಕ್ಷಿಯಾಗಿದ್ದಾರೆ.







