ಉಡುಪಿ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜಟ್ಟಿ ನಿರ್ಮಾಣಕ್ಕೆ 5.50 ಕೋಟಿ ರೂ. ಬಿಡುಗಡೆಗೆ ಆದೇಶ

ಉಡುಪಿ, ಫೆ.28: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜಟ್ಟಿ ನಿರ್ಮಾಣ ಯೋಜನೆಗೆ ರಾಜ್ಯ ಸರಕಾರ 5.50 ಕೋಟಿ ರೂ. ಮೊತ್ತ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಕರ್ನಾಟಕ ಟೂರಿಸಂ ವಿಷನ್ ಗ್ರೂಪ್‌ನ ಶಿಫಾರಸ್ಸುಗಳಲ್ಲಿ ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫೆರ್ರಿ ಜಟ್ಟಿ ನಿರ್ಮಾಣ ಕಾಮಗಾರಿಯನ್ನು ಪ್ರವಾಸೋದ್ಯಮ ಇಲಾಖೆಯ ಮೇಲುಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಲು ಯೋಜಿಸಲಾಗಿತ್ತು.
ಆದರೆ ಸಿಆರ್‌ಝಡ್ ನಿಯಮಾವಳಿ ಅನ್ವಯ ಫೆರ್ರಿ ಜಟ್ಟಿ ನಿರ್ಮಾಣ ಅಸಾಧ್ಯವಾಗಿರುವುದರಿಂದ ಉಡುಪಿ ಜಿಲ್ಲಾಧಿಕಾರಿಯವರು ಫೆರ್ರಿ ಜಟ್ಟಿ ಬದಲು ಫ್ಲೋಟಿಂಗ್ ಜಟ್ಟಿ ನಿರ್ಮಿಸುವ ಬಗ್ಗೆ ನೀಡಿದ ಅಭಿಪ್ರಾಯ ಹಾಗೂ ಅನುಷ್ಠಾನಕ್ಕೆ ಸಲ್ಲಿಸಿದ ವರದಿ ಮತ್ತು ಲೋಕೋಪಯೋಗಿ ಇಲಾಖೆ ಮೂಲಕ ಸಲ್ಲಿಸಿದ ಅಂದಾಜು ಪಟ್ಟಿಯಂತೆ ಪ್ರವಾಸೋದ್ಯಮ ಇಲಾಖೆಯು ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜಟ್ಟಿ ನಿರ್ಮಿಸುವ 5.50 ಕೋಟಿ ರೂ. ಮೊತ್ತದ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿ ಆದೇಶಿಸಿದೆ ಎಂದು ರಘುಪತಿ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೈಂಟ್ ಮೇರೀಸ್ ದ್ವೀಪದಲ್ಲಿ 113ಮೀ. ಉದ್ದದ ಹಾಗೂ 5.00ಮೀ.ಅಗಲದ ಪೈಲ್ ಅಡಿಪಾಯದ ಜೆಟ್ಟಿ ನಿರ್ಮಾಣ ಮಾಡಲು ಒಟ್ಟು 5.50 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ ಜಟ್ಟಿ ನಿರ್ಮಾಣಕ್ಕೆ 3.74 ಕೋಟಿ ರೂ., ಜಿಎಸ್‌ಟಿ 67.49 ಲಕ್ಷ ರೂ., ಸಾಮಗ್ರಿ ಮತ್ತು ಉಪಕರಣಗಳ ಸಾಗಾಟ ವೆಚ್ಚ 70ಲಕ್ಷ ರೂ.ಗಳಾಗಿವೆ. ಉಳಿದ ವೆಚ್ಚಗಳು ಸೇರಿ ಒಟ್ಟು 5.50 ಕೋಟಿ ರೂ.ಗೆ ಅಂದಾಜು ಪಟ್ಟಿ ಸಲ್ಲಿಸಿದ್ದಕ್ಕೆ ಅನುಮೋದನೆ ನೀಡಲಾಗಿದ್ದು, ನಿರ್ದಿಷ್ಟ ಅವಧಿಯಲ್ಲಿ ಕಾಮಗಾರಿಯನ್ನು ಪೂಣಣೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ರಮುಖ ಯೋಜನೆಯಾದ ತೇಲುವ ಜಟ್ಟಿ ನಿರ್ಮಾಣದ ಬೇಡಿಕೆಗೆ ಅನುಮತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.
ಮಣಿಪಾಲ-ಶೀಂಬ್ರ ರಸ್ತೆಗೆ 5 ಕೋಟಿ: ಈ ನಡುವೆ ಮಣಿಪಾಲ - ಶೀಂಬ್ರ - ಸಿದ್ಧಿವಿನಾಯಕ ದೇವಸ್ಥಾನ ರಸ್ತೆ ಅಭಿವೃದ್ಧಿ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಲೋಕೋಪಯೋಗಿ ಸಚಿವರು 5 ಕೋಟಿ ರೂ. ಬಿಡುಗಡೆಗೆ ಆದೇಶ ನೀಡಿದ್ದಾರೆ ಎಂದೂ ಶಾಸಕರು ತಿಳಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಬಹುಕಾಲದ ಬೇಡಿಕೆಯ ಮಣಿಪಾಲ - ಶೀಂಬ್ರ - ಸಿದ್ಧಿವಿನಾಯಕ ದೇವಸ್ಥಾನ ರಸ್ತೆ ಅಭಿವೃದ್ಧಿ ಹಾಗೂ ಈ ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ಮತ್ತು ಕಕ್ಕುಂಜೆ ಗರಡಿಯಿಂದ ರವಿಶೆಟ್ಟಿ ಮನೆವರೆಗೆ ರಸ್ತೆ ಅಭಿವೃದ್ಧಿಗಾಗಿ ಶಾಸಕ ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ ರೂ. ಅನುದಾನ ಮಂಜೂರುಗೊಳಿಸಿ ಆದೇಶಿಸಲಾಗಿದೆ. ಇದಕ್ಕಾಗಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ರಿಗೆ ಕೃತಜ್ಞತೆ ಸಲ್ಲಿಸುವುದಾಗಿ ರಘುಪತಿ ಭಟ್ ಹೇಳಿದ್ದಾರೆ.







