ಮರಾಟಿ ವಧು-ವರರ ಅನ್ವೇಷಣೆ ಸಮಾಜಮುಖಿ ಕೆಲಸ: ಶಾಸಕ ಡಾ.ವೈ.ಭರತ್ ಶೆಟ್ಟಿ

ಮಂಗಳೂರು, ಫೆ.29: ಮರಾಟಿ ವಧು-ವರರ ಅನ್ವೇಷಣೆಯು ಇತರ ಸಮಾಜಕ್ಕೆ ಪ್ರೇರಣೆಯಾಗಿದೆ. ಸಂಘಟನೆಯ ವಿನೂತನ ಹಾಗೂ ಸಮಾಜಮುಖಿ ಕೆಲಸವು ಶ್ಲಾಘನೀಯ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
ದ.ಕ.ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ಹಾಗೂ ಮರಾಟಿ ಮಹಿಳಾ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ರವಿವಾರ ನಗರದ ಬಾಳಂಭಟ್ ಹಾಲ್‌ನಲ್ಲಿ ಮರಾಟಿ ಭಾವಿ ವಧು-ವರರ ಅನ್ವೇಷಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ರವಿಪ್ರಸಾದ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮಕ್ಕಳ ತಜ್ಞ ಡಾ.ಬಿ.ನಾರಾಯಣ ನಾಯ್ಕ್ ವಧು-ವರರ ಅನ್ವೇಷಣಾ ಪುಸ್ತಕ ಬಿಡುಗಡೆಗೊಳಿಸಿದರು. ಕೆನರಾ ಬ್ಯಾಂಕ್‌ನ ನಿವೃತ್ತ ಡಿಜಿಎಂ ಸುಂದರ ನಾಯ್ಕ್ ಎಸ್. ಬೆಂಗಳೂರು ಎನ್‌ಎಎಲ್ ಹಿರಿಯ ಪ್ರಧಾನ ವಿಜ್ಞಾನಿ ಶೋಭಾವತಿ ಎಂ.ಟಿ. ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ನಾಯ್ಕ್ ಎಚ್. (ಆಸ್ಪಿನ್‌ವಾಲ್) ಮಾರ್ಗದರ್ಶನದಲ್ಲಿ ವಧು-ವರರ ಭಾವಚಿತ್ರ ಹಾಗೂ ವಿವರಗಳನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಿ, ವಿವರಗಳನ್ನು ಮೊಬೈಲ್ ಮುಖಾಂತರ ಎಲ್ಲ ಭಾವಿ ವಧು-ವರರಿಗೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಪ್ರಾಯೋಜಕತ್ವದಲ್ಲಿ ಪೌರಾಣಿಕ ರೂಪಕ ಮತ್ತು ಸಮೂಹ ನೃತ್ಯ ಕಾರ್ಯಕ್ರಮ ನಡೆಯಿತು. ಶಾಲಿನಿ ಎಂ. ನಾಯ್ಕ್ ವಂದಿಸಿದರು, ಸತೀಶ್ ಕುಮಾರ್ ಕಯ್ಯಾರ್ ಹಾಗೂ ವನಿತಾ ಸುಂದರ್ ಕಾರ್ಯಕ್ರಮ ನಿರೂಪಿಸಿದರು.







