ಮಾ.4ರಿಂದ ಬಾರಕೂರಿನಲ್ಲಿ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ಗೆ ನಿಲುಗಡೆ

ಉಡುಪಿ, ಫೆ.28: ಬ್ರಹ್ಮಾವರ ಆಸುಪಾಸಿನ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆಯಂತೆ ಮುಂಬೈ ಹಾಗೂ ಮಂಗಳೂರು ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ಮಾ.4ರಿಂದ ಬಾರಕೂರು ನಿಲ್ದಾಣದಲ್ಲಿ ನಿಲುಗಡೆ ನೀಡಲು ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಮುಂಬೈ ಹಾಗೂ ತಿರುವನಂತಪುರಂ ನಡುವೆ ಸಂಚರಿಸುವ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ಮಾ.4ರಿಂದ ಮತ್ತೆ ಕುಂದಾಪುರದಲ್ಲಿ ನಿಲುಗಡೆ ನೀಡಲು ಸಹ ರೈಲ್ವೆ ಇಲಾಖೆ ಒಪ್ಪಿಕೊಂಡಿದೆ ಎಂದವರು ತಿಳಿಸಿದ್ದಾರೆ.
ಕೊರೋನ ಸಂದರ್ಭದಲ್ಲಿ ಈ ಎರಡು ನಿಲುಗಡೆಗಳು ರದ್ದಾಗಿದ್ದು, ಇದಕ್ಕಾಗಿ ಕುಂದಾಪುರ ರೈಲ್ವೆ ಹೋರಾಟ ಸಮಿತಿ ಹಾಗೂ ಇತರ ಸಂಘಟನೆಗಳು ಮನವಿ ಮಾಡಿ ಒತ್ತಾಯಿಸಿದ್ದವು. ಜಿಲ್ಲೆಯ ಜನಪ್ರತಿನಿಧಿಗಳು ಸಹ ಈ ಬಗ್ಗೆ ವಿವಿಧ ಸಭೆಗಳಲ್ಲಿ ಒತ್ತಾಯಿಸಿದ್ದರು.
ಬೆಂಗಳೂರಿನಿಂದ ಗೋವಾಕ್ಕೆ ತೆರಳುವ ಯಶವಂತಪುರ- ವಾಸ್ಕೋಡಾಗಾಮ ಎಕ್ಸ್‌ಪ್ರೆಸ್ ರೈಲಿಗೆ ಚಿಕ್ಕಮಗಳೂರಿನ ಕಡೂರು ನಿಲ್ದಾಣದಲ್ಲಿ ನಿಲುಗಡೆ ನೀಡಲು ಸಹ ಇಲಾಖೆ ಸಮ್ಮತಿಸಿದೆ. ಅಲ್ಲದೇ ಬೆಂಗಳೂರಿನಿಂದ ರಾಜಸ್ಥಾನದ ಬಾರ್ಮೆರ್‌ಗೆ ಸಂಪರ್ಕ ಕೊಂಡಿಯಾಗಿದ್ದ ಯಶವಂತಪುರ- ಬಾರ್ಮೆರ್ ರೈಲಿಗೆ ಜನರ ಬೇಡಿಕೆಯಂತೆ ಮಾ.4ರಿಂದ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಿಲುಗಡೆ ಇರುತ್ತದೆ. ಈ ರೈಲಿಗೆ ತುಮಕೂರು, ಅರಸೀಕೆರೆ ಹಾಗೂ ದಾವಣಗೆರೆಯಲ್ಲಿ ಮಾತ್ರ ಈ ಮೊದಲು ನಿಲುಗಡೆ ಇತ್ತು ಎಂದು ಶೋಭಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.