ಕುನಾಲ್ ಕಾಮ್ರಾ ಕಾನೂನು ಕ್ರಮಕ್ಕೆ ಮುಂದಾದ ಬಳಿಕ ವೀಡಿಯೊದಲ್ಲಿನ ಪ್ರಾಯಮಿತಿಯನ್ನು ತೆಗೆದುಹಾಕಿದ ಯೂಟ್ಯೂಬ್

ಹೊಸದಿಲ್ಲಿ, ಫೆ. 28: ಕಾಮಿಡಿಯನ್ ಕುನಾಲ್ ಕಾಮ್ರಾ ಪೋಸ್ಟ್ ಮಾಡಿದ ‘‘ಜಾತಿ ರಹಿತತೆ’’ ಕುರಿತ ಇತ್ತೀಚೆಗಿನ ವೀಡಿಯೊದಲ್ಲಿನ ವಯಸ್ಸಿನ ನಿರ್ಬಂಧವನ್ನು ತೆಗೆದು ಹಾಕಲಾಗಿದೆ ಎಂದು ಯುಟ್ಯೂಬ್ ಮಂಗಳವಾರ ಹೇಳಿದೆ.
ಟ್ವಿಟರ್ ಖಾತೆಯಲ್ಲಿ ಮಂಗಳವಾರ ಮಾಡಿದ ಯಪೋಸ್ಟ್ ನಲ್ಲಿ ಯೂಟ್ಯೂಬ್, ‘‘ನಾವು ಮತ್ತೊಮ್ಮೆ ಪರಿಶೀಲನೆ ನಡೆಸಿದೆವು. ನಿಮ್ಮ ವೀಡಿಯೊದ ಮೇಲಿನ ವಯಸ್ಸಿನ ನಿರ್ಬಂಧವನ್ನು ತೆಗೆದು ಹಾಕಿದ್ದೇವೆ. ನಮ್ಮ ತಂಡ ಹೆಚ್ಚಿನ ವಿವರಗಳನ್ನು ನಿಮ್ಮ ಇಮೇಲ್ ಗೆ ರವಾನಿಸಿದೆ. ನಿರೀಕ್ಷಿಸಿ’’ ಎಂದಿದೆ.
ಕುನಾಲ್ ಕಾಮ್ರಾ ಅವರು ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್ನಲ್ಲಿ ಯೂಟ್ಯೂಬ್ ವಿಳಾಸಕ್ಕೆ ವಿಜಯದ ಸಂದೇಶ ಪೋಸ್ಟ್ ಮಾಡಿದ್ದಾರೆ. ‘‘ನಿಮ್ಮ ಕಾನೂನು ಶುಲ್ಕವನ್ನು ಉಳಿಸಿರುವುದಕ್ಕೆ ಅಭಿನಂದನೆಗಳು...’’ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಜಾತಿ ವ್ಯವಸ್ಥೆ ಕುರಿತು ಹಾರ್ವಡ್ ನ ಶಿಕ್ಷಣ ತಜ್ಞ ಡಾ. ಸೂರಜ್ ಯೆಂಗ್ಡೆ ಮಾತನಾಡಿದ ವೀಡಿಯೊವನ್ನು ಕಾಮ್ರಾ ಅವರು ತನ್ನ ‘‘ಶಟ್ ಅಪ್ ಯಾ ಕುನಾಲ್’’ ಪ್ರದರ್ಶನದ 25ನೇ ಸಂಚಿಕೆಯಾಗಿ ಫೆಬ್ರವರಿ 25ರಂದು ಅಪ್ಲೋಡ್ ಮಾಡಿದ್ದರು.
ಆದರೆ, ಯುಟ್ಯೂಬ್ ವೀಡಿಯೊದೊಂದಿಗೆ ಈ ಸಂದೇಶ ಹಾಕಿತ್ತು. ‘‘ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ: ಈ ಕೆಳಗಿನ ಅಂಶ ಆತ್ಮಹತ್ಯೆ ಅಥವಾ ಸ್ವ-ಹಾನಿಗೆ ಸಂಬಂಧಿಸಿದ ವಿಷಯಗಳನ್ನು ಹೊಂದಿರಬಹುದು’’. ಅಲ್ಲದೆ, ಈ ವೀಡಿಯೊ ವೀಕ್ಷಿಸಲು ಆಕೆ/ಆತನ ನಿರ್ಧಾರವನ್ನು ದೃಢಪಡಿಸುವಂತೆ ವೀಕ್ಷಕರನ್ನು ಅದು ಕೇಳಿತ್ತು.
ಈ ಸಂದೇಶವನ್ನು ಡಾ. ಯೆಂಗ್ಡೆ ಹಾಗೂ ಕಾಮ್ರಾ ಪ್ರಶ್ನಿಸಿದ್ದರು.







