ಮಂಗಳೂರು: ಬಜೆಟ್ ವಿರುದ್ಧ ಪ್ರತಿಭಟನೆ

ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರ ಮಂಡಿಸಿದ ಜನವಿರೋಧಿ ಬಜೆಟ್ ಖಂಡಿಸಿ ನಗರದ ಮಿನಿ ವಿಧಾನ ಸೌಧದ ಮುಂದೆ ಮಂಗಳವಾರ ಸಿಪಿಎಂ ಮತ್ತು ಸಿಪಿಐ ಪಕ್ಷ ಜಂಟಿಯಾಗಿ ಪ್ರತಿಭಟನೆ ನಡೆಸಿತು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಮಾತನಾಡಿ ‘ಕೇಂದ್ರ ಮತ್ತು ರಾಜ್ಯ ಸರಕಾರ ಮಂಡಿಸಿದ ಬಜೆಟ್ ರೈತ ವಿರೋಧಿಯಾಗಿದೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಈ ಬಜೆಟ್ ಪೂರಕವಾಗಿಲ್ಲ. ಜಗತ್ತಿನ 121 ರಾಷ್ಟ್ರಗಳ ಪೈಕಿ ಭಾರತದ ಆರ್ಥಿಕವಾಗಿ ಶಕ್ತಿಶಾಲಿಯಾಗಿಲ್ಲ. ಪ್ರತೀ ನಿಮಿಷಕ್ಕೆ 12 ಮಂದಿ ಆಹಾರದ ಕೊರತೆಯಿಂದ ಸಾಯುತ್ತಿದ್ದಾರೆ. ಅದರ ನಿಯಂತ್ರಣಕ್ಕೆ ಸರಕಾರ ಕ್ರಮ ಕೈಗೊಂಡಿಲ್ಲ. ಬದಲಾಗಿ ಬಂಡವಾಳ ಶಾಹಿಗಳ 10 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಮನ್ನಾ ಮಾಡಿಕೊಂಡು ಉದ್ಯಮಿಗಳ ರಕ್ಷಣೆಗೆ ಮುಂದಾಗಿದೆ ಎಂದು ಆಪಾದಿಸಿದರು.
ಪ್ರತಿಭಟನೆಯಲ್ಲಿ ಎಡ ಪಕ್ಷಗಳ ಮುಖಂಡರಾದ ಕೆ. ಯಾದವ ಶೆಟ್ಟಿ, ವಸಂತ ಆಚಾರಿ, ಬಿ.ಶೇಖರ್, ಸುನೀಲ್ ಕುಮಾರ್ ಬಜಾಲ್, ಸದಾಶಿವ ದಾಸ್, ಕೃಷ್ಣಪ್ಪ ಸಾಲ್ಯಾನ್, ಸಂತೋಷ್ ಬಜಾಲ್, ಎಚ್.ವಿ.ರಾವ್, ವಿ.ಕುಕ್ಯಾನ್, ಸುರೇಶ್ ಕುಮಾರ್ ಬಂಟ್ವಾಳ್ ಮತ್ತಿತರರು ಪಾಲ್ಗೊಂಡಿದ್ದರು.





