ಮಾಜಿ ಸೈನಿಕರ ಒಆರ್ ಒಪಿ ಬಾಕಿ ಪಿಂಚಣಿ ಪಾವತಿಯಲ್ಲಿ ವಿಳಂಬ: ರಕ್ಷಣಾ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ತರಾಟೆ

ಹೊಸದಿಲ್ಲಿ, ಫೆ. 28: ಸಶಸ್ತ್ರ ಪಡೆಗಳ ಅರ್ಹ ಪಿಂಚಣಿದಾರರಿಗೆ ‘ಸಮಾನ ದರ್ಜೆಗೆ ಸಮಾನ ವೇತನ (OROP)’ ನಿಯಮದಡಿ ನೀಡಬೇಕಾಗಿರುವ ಬಾಕಿ ಪಿಂಚಣಿಯನ್ನು ನೀಡುವಲ್ಲಿ ಆಗುತ್ತಿರುವ ವಿಳಂಬಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್(Supreme Court) ಸೋಮವಾರ ಕೇಂದ್ರ ರಕ್ಷಣಾ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.
ಬಾಕಿ ಪಿಂಚಣಿಯನ್ನು ಮಾರ್ಚ್ 15ರೊಳಗೆ ಪಾವತಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಜನವರಿ 9ರಂದು ನಿರ್ದೇಶನ ನೀಡಿತ್ತು. ಅದು ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನೀಡಿರುವ ಎರಡನೇ ವಿಸ್ತರಣೆಯಾಗಿತ್ತು. ಅದಕ್ಕೂ ಮೊದಲು, ಪಿಂಚಣಿಗಳ ಬಾಕಿ ವಿಲೇವಾರಿಗೆ ಹೆಚ್ಚುವರಿ ಮೂರು ತಿಂಗಳ ಕಾಲಾವಕಾಶವನ್ನು ನೀಡುವಂತೆ ಕೋರಿ ಸರಕಾರವು ಕಳೆದ ವರ್ಷದ ಜೂನ್ನಲ್ಲಿ ಸುಪ್ರೀಂ ಕೋರ್ಟ್ಗೆ ಹೋಗಿತ್ತು.
ಆದರೆ, ಜನವರಿ 20ರಂದು ಪ್ರಕಟನೆಯೊಂದನ್ನು ಹೊರಡಿಸಿದ ರಕ್ಷಣಾ ಸಚಿವಾಲಯವು, ಬಾಕಿಯನ್ನು ನಾಲ್ಕು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಹೇಳಿತು.
ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ. ಡಿ.ವೈ. ಚಂದ್ರಚೂಡ್(D.Y. Chandrachud) ನೇತೃತ್ವದ ನ್ಯಾಯಪೀಠವು, ಪಿಂಚಣಿ ಬಾಕಿಯನ್ನು ಕಂತುಗಳಲ್ಲಿ ಪಾವತಿಸುವ ಸಚಿವಾಲಯದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ(P.S. Narasimha) ಮತ್ತು ಜೆ.ಬಿ. ಪರ್ದಿವಾಲಾ(J.B. Pardiwala) ಕೂಡ ಇದ್ದಾರೆ.
‘‘ಬಾಕಿ ಪಾವತಿಗೆ ನಾವು ನಿಮಗೆ ಮಾರ್ಚ್ 15ರವರೆಗೆ ಕಾಲಾವಕಾಶ ನೀಡಿದೆವು. ಈಗ, ನಮ್ಮ ಜನವರಿ 9ರ ಆದೇಶದ ಮುಖಕ್ಕೆ ಬಡಿದಂತೆ, ಬಾಕಿಯನ್ನು ನಾಲ್ಕು ಸಮಾನ ಕಂತುಗಳಲ್ಲಿ ನೀಡುತ್ತೇವೆ ಎಂಬ ಹೇಳಿಕೆಯನ್ನು ನೀವು ಹೇಗೆ ಹೊರಡಿಸಲು ಸಾಧ್ಯ? ನಾವು ನಿಮ್ಮ (ರಕ್ಷಣಾ ಸಚಿವಾಲಯ)ದ ಕಾರ್ಯದರ್ಶಿಯ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಬಾರದು?’’ ಎಂದು ಚಂದ್ರಚೂಡ್ ಹೇಳಿದರು.
ನ್ಯಾಯಾಂಗ ಪ್ರಕ್ರಿಯೆಯ ಪಾವಿತ್ರತೆಯನ್ನು ಕಾಪಾಡಬೇಕಾಗಿದೆ ಎಂದು ನ್ಯಾಯಾಲಯ ಹೇಳಿತು.
‘‘ಈ ಹೇಳಿಕೆಯನ್ನು ಕಾರ್ಯದರ್ಶಿ ಒಂದೋ ಹಿಂದೆ ಪಡೆಯಬೇಕು ಅಥವಾ ನಾವು ರಕ್ಷಣಾ ಸಚಿವಾಲಯಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ನೀಡುತ್ತೇವೆ ಹಾಗೂ ಅದು ತುಂಬಾ ಗಂಭೀರವಾಗಿರುತ್ತದೆ’’ ಎಂದು ನ್ಯಾಯಪೀಠ ಎಚ್ಚರಿಸಿತು.
ಮಾರ್ಚ್ 15ರೊಳಗೆ ಬಾಕಿ ಪಾವತಿಸದಿದ್ದರೆ 9 ಶೇಕಡ ಬಡ್ಡಿ ವಿಧಿಸಲಾಗುವುದು ಎಂದು ಅದು ಹೇಳಿತು.







