ಅಬ್ದುಲ್ ಕರೀಮ್ ಸುರತ್ಕಲ್‍ರವರ ‘ದಿಲ್ ಕೀ ಪುಕಾರ್’ ಪುಸ್ತಕ ಬಿಡುಗಡೆ

ಬೆಂಗಳೂರು, ಫೆ.28: ಮಂಗಳೂರಿನ ಅಬ್ದುಲ್ ಕರೀಮ್ ಸುರತ್ಕಲ್ ಸಂಪಾದಕತ್ವದ ‘ದಿಲ್ ಕೀ ಪುಕಾರ್’ ಉರ್ದು ಹಾಗೂ ಹಿಂದಿ ಪುಸ್ತಕ ಇತ್ತೀಚೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಸಭಾಂಗಣದಲ್ಲಿ ಬಿಡುಗಡೆಯಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಡ್ವೊಕೇಟ್ ಅಯ್ಯೂಬ್ ಖಾನ್ ವಹಿಸಿದ್ದರು. ಉರ್ದು ಸಾಹಿತಿ ಮುನೀರ್ ಅಹ್ಮದ್ ಜಾಮಿ ನಿರೂಪಿಸಿದರು. ಅಬ್ದುಲ್ ಕರೀಮ್ ಅವರು ಉರ್ದು ಭಾಷಿಕರು ಹೆಚ್ಚಿನ ಪ್ರಮಾಣದಲ್ಲಿ ಇಲ್ಲದಿರುವ ಕರಾವಳಿ ಭಾಗದವರಾಗಿದ್ದರೂ, ಉರ್ದು ಭಾಷೆಯಲ್ಲಿ ಪುಸ್ತಕ ರಚನೆ ಮಾಡಿದ್ದು ಶ್ಲಾಘನೀಯ ಎಂದು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಉರ್ದು ಭಾಷೆಯ ಮೇಲಿನ ಇವರ ಪ್ರೀತಿ, ಸಾಹಿತ್ಯದ ಸೆಳೆತದಿಂದಾಗಿ ಪುಸ್ತಕ ರಚನೆ ಮಾಡುವಂತಾಗಿದೆ. ಮಂಗಳೂರು ಭಾಗದಲ್ಲಿ ಉರ್ದು ಕಲಿಕಾ ಕೇಂದ್ರಗಳನ್ನು ಸ್ಥಾಪನೆ ಮಾಡುವಂತೆ ಅತಿಥಿಗಳು ಅವರಿಗೆ ಸಲಹೆ ನೀಡಿದರು.
ತಮ್ಮ ಪುಸ್ತಕದ ಕುರಿತು ಮಾತನಾಡಿದ ಅಬ್ದುಲ್ ಕರೀಮ್ ಸುರತ್ಕಲ್, ನಾನು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದ ಉರ್ದು ಕವಿತೆಗಳನ್ನು ಹಂಚಿಕೊಳ್ಳುತ್ತಿದ್ದೆ. ಅದನ್ನು ಗಮನಿಸಿದ ನನ್ನ ಸ್ನೇಹಿತರು, ಹಿತೈಷೆಗಳು ಉರ್ದು ಕವಿತೆಗಳನ್ನು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಬದಲು ಅದಕ್ಕೆ ಒಂದು ಪುಸ್ತಕದ ರೂಪ ನೀಡುವಂತೆ ಸಲಹೆ ನೀಡಿದರು. ಈ ಪುಸ್ತಕ ಹೊರಬರಲು ಅವರ ಸಲಹೆಗಳು, ಪ್ರೋತ್ಸಾಹವೇ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೌಲಾನ ಆಝಾದ್ ವಿವಿಯ ಪ್ರಾದೇಶಿಕ ನಿರ್ದೇಶಕರಾದ ಡಾ.ಖಾಝಿ ಝಿಯಾ, ಫಯಾಝ್ ಖುರೇಶಿ, ಸಯ್ಯದ್ ಜಮಾತ್ ಅಲಿ ಶಾ, ಅಮೀರ್ ಅಹಮದ್, ಡಾ.ಆಬಿದಾ ನಸ್ರೀನ್, ಅಬ್ದುಲ್ ಖಾದರ್ ಔಫಾಝ್, ಸಯ್ಯದ್ ಜುನೇದ್ ಅಲಿ ಶಾ ಉಪಸ್ಥಿತರಿದ್ದರು.