ಮಂಗಳೂರು: ರೈಲಿನಲ್ಲಿ ಕಳವಾಗಿದ್ದ ಬ್ಯಾಗ್ ಕೊನೆಗೂ ಪತ್ತೆ

ಮಂಗಳೂರು, ಫೆ.29: ಮುಂಬೈಯಿಂದ ಮಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಕಳವಾಗಿದ್ದ ಟ್ರಾಲಿ ಬ್ಯಾಗ್ ಕೊನೆಗೂ ಪತ್ತೆಯಾಗಿದೆ. ಈ ಟ್ರಾಲಿ ಬ್ಯಾಗ್‌ನಲ್ಲಿ 8.75 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿರುವುದು ಕಂಡು ಬಂದಿದೆ.
ಫೆ.27ರಂದು ರವೀಂದ್ರ ಎಂ.ಶೆಟ್ಟಿ (74) ಎಂಬವರು ತನ್ನ ಹೆಂಡತಿ ಶಶಿಕಲಾ ಶೆಟ್ಟಿ ಅವರೊಂದಿಗೆ ಮುಂಬೈಯಿಂದ ಮಂಗಳೂರಿಗೆ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಗಮಿಸುತ್ತಿದ್ದರು. ಈ ಸಂದರ್ಭ ಸುರತ್ಕಲ್-ಮಂಗಳೂರು ಮಧ್ಯೆ ಬ್ಯಾಗ್ ಕಳವಾಗಿತ್ತು. ಈ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಪ್ರಕರಣದ ಪತ್ತೆಗೆ ರೈಲ್ವೆಯ ಬೆಂಗಳೂರು ಪೊಲೀಸ್ ಅಧೀಕ್ಷಕಿ ಡಾ. ಸೌಮ್ಯಲತಾ ಎಸ್.ಕೆ., ಉಪಾಧೀಕ್ಷಕಿ ಗೀತಾ ಸಿ.ಆರ್. ಮಾರ್ಗದರ್ಶನದಂತೆ ಮಂಗಳೂರು ರೈಲ್ವೆ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ಮತ್ತು ವಿಶೇಷ ತಂಡವು ತನಿಖೆ ಆರಂಭಿಸಿತು. ನಾನಾ ಆಯಾಮಗಳಲ್ಲಿ ತನಿಖೆ ನಡೆಸಿ ಶೋಧ ನಡೆಸಿ ಟ್ರ್ಯಾಕ್ ಪೆಟ್ರೋಲಿಂಗ್ ನಡೆಸಿದರು.
ಈ ಸಂದರ್ಭ ಕಳೆದು ಹೋದ ಚಿನ್ನಾಭರಣಗಳಿದ್ದ ಟ್ರಾಲಿ ಬ್ಯಾಗ್ ಕುಲಶೇಖರ ಟನಲ್ ಬಳಿಯ ತಿರುವಿನಲ್ಲಿ ರೈಲು ಹಳಿ ಪಕ್ಕದಲ್ಲಿ ಕಂಡು ಬಂದಿದ್ದು, ಇದರಲ್ಲಿದ್ದ 245 ಗ್ರಾಂ ತೂಕದ ವಜ್ರದ ಮತ್ತು ಚಿನ್ನದ ಆಭರಣಗಳು ಕೂಡ ಹಾಗೇ ಇವೆ. ಇದರ ಅಂದಾಜು ಮೌಲ್ಯ 8,57,000 ರೂ. ಆಗಿದೆ. ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.