ಅಮೆರಿಕ: ಟಿಕ್‌ಟಾಕ್ ನಿಷೇಧ ಜಾರಿಗೆ 30 ದಿನದ ಗಡುವು

ವಾಷಿಂಗ್ಟನ್, ಫೆ.28: ಚೀನೀ ಮೂಲದ ಆ್ಯಪ್ ಟಿಕ್‌ಟಾಕ್ ಅನ್ನು ಸರಕಾರದ ಸಾಧನಗಳಿಂದ 30 ದಿನಗಳೊಳಗೆ ತೆಗೆದುಹಾಕಲು ಅಮೆರಿಕ ಸಂಸತ್ ನೀಡಿದ ಆದೇಶವನ್ನು ಪಾಲಿಸುವಂತೆ ಫೆಡರಲ್ ಏಜೆನ್ಸಿಗಳಿಗೆ ಶ್ವೇತಭವನ ಸೂಚಿಸಿದೆ.
ವೀಡಿಯೊ ತುಣುಕು ಶೇರ್‌ಮಾಡುವ ಆ್ಯಪ್ ಟಿಕ್‌ಟಾಕ್ ಅನ್ನು ಫೆಡರಲ್ ಏಜೆನ್ಸಿ ಮಾಲಕತ್ವದ ಅಥವಾ ಏಜೆನ್ಸಿ ಕಾರ್ಯನಿರ್ವಹಿಸುವ ಸಾಧನಗಳಿಂದ, ಅಥವಾ ಏಜೆನ್ಸಿ ನಿರ್ವಹಿಸುವ ಮಾಹಿತಿ ತಂತ್ರಜ್ಞಾನ ಸಾಧನಗಳಿಂದ 30 ದಿನಗಳೊಳಗೆ ತೆಗೆದುಹಾಕುವಂತೆ ಹಾಗೂ ಮುಂದಿನ ದಿನದಲ್ಲಿ ಇದರ ಅನುಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಶ್ವೇತಭವನದ ನಿರ್ವಹಣೆ ಮತ್ತು ಬಜೆಟ್ ವಿಭಾಗದ ನಿರ್ದೇಶಕಿ ಶಲಂದಾ ಯಂಗ್ ಆದೇಶ ಜಾರಿಗೊಳಿಸಿದ್ದಾರೆ. ಫೆಡರಲ್ ಸರಕಾರದೊಂದಿಗೆ ಸಂಬಂಧ ಹೊಂದಿರದ, ಅಮೆರಿಕದಲ್ಲಿನ ವ್ಯವಹಾರಗಳಿಗೆ ಅಥವಾ ಈ ಜನಪ್ರಿಯ ಆ್ಯಪ್ ಅನ್ನು ಬಳಸುತ್ತಿರುವ ಲಕ್ಷಾಂತರ ಖಾಸಗಿ ಜನರಿಗೆ ಈ ನಿಷೇಧ ಅನ್ವಯವಾಗುವುದಿಲ್ಲ ಎಂದು ಆದೇಶ ತಿಳಿಸಿದೆ.
ಆದರೆ, ಇತ್ತೀಚೆಗೆ ಸಂಸತ್‌ನಲ್ಲಿ ಮಂಡಿಸಲಾಗಿರುವ ಈ ದೇಶದಲ್ಲಿ ಟಿಕ್‌ಟಾಕ್ ಅನ್ನು ಪರಿಣಾಮಕಾರಿಯಾಗಿ ನಿಷೇಧಿಸಲಿದೆ ಎಂದು ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್(ಎಸಿಯುಎಲ್) ಕಳವಳ ವ್ಯಕ್ತಪಡಿಸಿದೆ. ಸಂಸತ್ತು ಟಿಕ್‌ಟಾಕ್ ಅನ್ನು ಸಂಪೂರ್ಣ ನಿಷೇಧಿಸುವ ಮೂಲಕ ಅಮೆರಿಕನ್ನರ ಸಂವಿಧಾನದತ್ತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು’ ಎಂದು ಎಸಿಯುಎಲ್‌ನ ಕಾರ್ಯನೀತಿ ವಿಭಾಗದ ಹಿರಿಯ ಅಧಿಕಾರಿ ಜೆನಾ ಲೆವೆಂಟಾಫ್ ಆಗ್ರಹಿಸಿದ್ದಾರೆ.