ಮಾಧ್ಯಮ ಅಕಾಡೆಮಿ ಬೈಲಾ ತಿದ್ದುಪಡಿಗೆ ಕ್ರಮ: ಸಿಎಂ ಭರವಸೆ

ಹುಬ್ಬಳ್ಳಿ, ಫೆ. 28: ಮಾಧ್ಯಮ ಅಕಾಡಮಿ ತಿದ್ದುಪಡಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಮಂಗಳವಾರ ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ತಮ್ಮ ನಿವಾಸದಲ್ಲಿಂದು ಪತ್ರಕರ್ತರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು. ಮಾಧ್ಯಮ ಅಕಾಡಮಿಯಲ್ಲಿ ರಾಜ್ಯದ ಎಲ್ಲ ಭಾಗಗಳಿಗೂ ಸೂಕ್ತ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಬೈಲಾ ತಿದ್ದುಪಡಿ ಹಾಗೂ ಅಕಾಡಮಿ ಪ್ರಶಸ್ತಿಯ ಆಯ್ಕೆಗೆ ಮಾನದಂಡ ನಿಗದಿಪಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದರು.
ಅಕಾಡಮಿಯಲ್ಲಿ ಪ್ರಾತಿನಿಧ್ಯ ಹಾಗೂ ಪ್ರಶಸ್ತಿ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿದೆ. ಈ ಭಾಗದ ಪತ್ರಕರ್ತರು ಈಗಲಾದರೂ ಎಚ್ಚೆತ್ತುಕೊಂಡಿರುವುದು ಸ್ವಾಗತಾರ್ಹ ಎಂದು ಬೊಮ್ಮಾಯಿ ಹೇಳಿದರು.
ಅಕಾಡಮಿಯ ಸದಸ್ಯರಲ್ಲಿ ಶೇ.50ರಷ್ಟು ಸದಸ್ಯತ್ವವನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು. ಪ್ರಶಸ್ತಿ ಆಯ್ಕೆಯ ಮಾನದಂಡಗಳು ಬದಲಾವಣೆಯಾಗಬೇಕು, ಪತ್ರಕರ್ತೆಯರಿಗೂ ಆದ್ಯತೆ ಸಿಗಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ನಿಯೋಗ ಒತ್ತಾಯಿಸಿದೆ.







