ಇಂದು ಮೂರನೇ ಟೆಸ್ಟ್: ಡಬ್ಲ್ಯುಟಿಸಿ ಫೆನಲ್‌ನತ್ತ ಭಾರತದ ಚಿತ್ತ

ಇಂದೋರ್, ಫೆ.28: ಈಗಾಗಲೇ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡ ಬುಧವಾರದಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ. ಭಾರತವು ಈ ಪಂದ್ಯವನ್ನು ಗೆಲ್ಲುವ ಮೂಲಕ ಜೂನ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಾತ್ರಿ ಪಡಿಸಿಕೊಳ್ಳುವತ್ತ ಚಿತ್ತಹರಿಸಿದ್ದಲ್ಲದೆ ಸ್ವದೇಶದಲ್ಲಿ ಸತತ 16ನೇ ಸರಣಿ ವಶಪಡಿಸಿಕೊಂಡು ದಾಖಲೆ ನಿರ್ಮಿಸಲು ಎದುರು ನೋಡುತ್ತಿದೆ.
4 ಪಂದ್ಯಗಳ ಸರಣಿಯಲ್ಲಿ ಸದ್ಯ ಭಾರತವು 2-0 ಮುನ್ನಡೆಯಲ್ಲಿದೆ. ಟ್ರೋಫಿಯನ್ನು ಕಳೆದುಕೊಂಡಿರುವ ಆಸ್ಟ್ರೇಲಿಯ ಇನ್ನುಳಿದ 2 ಪಂದ್ಯಗಳನ್ನು ಜಯಿಸಿ ಸರಣಿ ಸಮಬಲಗೊಳಿಸುವ ಇರಾದೆಯಲ್ಲಿದೆ. ಟೀಮ್ ಮ್ಯಾನೇಜ್‌ಮೆಂಟ್ ಫಾರ್ಮ್‌ನಲ್ಲಿಲ್ಲದ ಕೆ.ಎಲ್.ರಾಹುಲ್ ಹಾಗೂ ಅವಕಾಶಕ್ಕಾಗಿ ಕಾಯುತ್ತಿರುವ ಶುಭಮನ್ ಗಿಲ್‌ರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲದಲ್ಲಿದೆ.
ಪ್ರಸಕ್ತ ಸರಣಿಯಲ್ಲಿ 3 ಇನಿಂಗ್ಸ್‌ಗಳಲ್ಲಿ ಕೇವಲ 38 ರನ್ ಗಳಿಸಿದ್ದ ರಾಹುಲ್ ಟೆಸ್ಟ್ ತಂಡದಲ್ಲಿ ಈಗಾಗಲೇ ಉಪ ನಾಯಕನ ಸ್ಥಾನ ಕಳೆದುಕೊಂಡಿದ್ದಾರೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ರಾಹುಲ್ ಮೇಲೆ ಭಾರೀ ವಿಶ್ವಾಸ ಇರಿಸಿಕೊಂಡಿದೆ. ರನ್ ಬರ ನೀಗಿಸಿಕೊಳ್ಳಲು ರಾಹುಲ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
ಸರಣಿಯಲ್ಲಿ ಈ ತನಕ ರೋಹಿತ್ ಶರ್ಮಾ ಮಾತ್ರ ಏಕೈಕ ಶತಕ ಸಿಡಿಸಿದ್ದು, ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆದಿದ್ದಾರೆ. ಪತನಗೊಂಡ 40 ವಿಕೆಟ್‌ಗಳ ಪೈಕಿ 32 ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಉರುಳಿಸಿದ್ದಾರೆ. ರವೀಂದ್ರ ಜಡೇಜ, ಆರ್.ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಈ ತನಕ ಚೆಂಡಿನಲ್ಲಿ ಮಾತ್ರವಲ್ಲ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ.
ಎದುರಾಳಿ ಆಸ್ಟ್ರೇಲಿಯಕ್ಕೆ ನಾಗ್ಪುರ ಹಾಗೂ ದಿಲ್ಲಿ ಟೆಸ್ಟ್ ಪಂದ್ಯದ ಸೋಲಿನಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಲಭಿಸಿದೆ. ನಾಯಕ ಪ್ಯಾಟ್ ಕಮಿನ್ಸ್ , ಅಶ್ಟನ್ ಅಗರ್, ಜೋಶ್ ಹೇಝಲ್‌ವುಡ್ ಹಾಗೂ ಡೇವಿಡ್ ವಾರ್ನರ್ ಸ್ವದೇಶಕ್ಕೆ ವಾಪಸಾಗಿರುವ ಕಾರಣ ತಂಡದಲ್ಲಿ ಹಲವು ಬದಲಾವಣೆ ನಿರೀಕ್ಷಿಸಲಾಗುತ್ತಿದೆ. ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಟ್ರಾವಿಸ್ ಹೆಡ್ ಅವರು ಉಸ್ಮಾನ್ ಖ್ವಾಜಾರೊಂದಿಗೆ ಇನಿಂಗ್ಸ್ ಆರಂಭಿಸಬಹುದು. ಖ್ವಾಜಾ ದಿಲ್ಲಿ ಟೆಸ್ಟ್ ನಲ್ಲಿ 81 ರನ್ ಗಳಿಸಿದ್ದರು. ಸ್ಮಿತ್ ಹಾಗೂ ಲ್ಯಾಬುಶೇನ್ ಸರಣಿಯಲ್ಲಿ ಈ ತನಕ 30ಕ್ಕಿಂತ ಕಡಿಮೆ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಆಡಲು ಫಿಟ್ ಆಗಿದ್ದು, ಮಿಚೆಲ್ ಸ್ಟಾರ್ಕ್ ಜೊತೆಗೆ ಆಡುವ 11ರ ಬಳಗ ಸೇರಿಕೊಳ್ಳುವ ಸಾಧ್ಯತೆಯಿದೆ.