ಮುಸ್ಲಿಮರನ್ನು ಗುರಿಯಾಗಿರಿಸಿ ಕಾರ್ಯಕ್ರಮ ಪ್ರಸಾರ: ನ್ಯೂಸ್ 18 ಇಂಡಿಯಾಕ್ಕೆ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಹೊಸದಿಲ್ಲಿ, ಫೆ. 28: ಮುಸ್ಲಿಮರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ನಿರೂಪಕ ಅಮನ್ ಚೋಪ್ರಾ ನಿರೂಪಿಸಿದ ದ.ಕ. ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿಯ ಯುವ ಘಟಕದ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕುರಿತ ಕಾರ್ಯಕ್ರಮ ಸೇರಿದಂತೆ ನಾಲ್ಕು ಕಾರ್ಯಕ್ರಮಗಳ ಕುರಿತಂತೆ ನ್ಯೂಸ್ 18 ಇಂಡಿಯಾ ವಿರುದ್ಧ ಸುದ್ದಿ ಪ್ರಸಾರ ಹಾಗೂ ಡಿಜಿಟಲ್ ಮಾನದಂಡ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ಸೋಮವಾರ ದಂಡ ವಿದಿಸಿ ಆದೇಶ ಜಾರಿ ಮಾಡಿದೆ.
ಮೊದಲ ಕಾರ್ಯಕ್ರಮ ಅಂದರೆ, ಕಳೆದ ವರ್ಷ ಜನವರಿ 18ರಂದು ಚೋಪ್ರಾ ನಿರೂಪಿಸಿದ ಚರ್ಚೆ ಕಾರ್ಯಕ್ರಮ ಕೋಮವಾದಿ ಅಂಶಗಳನ್ನು ಒಳಗೊಂಡಿತ್ತು ಎಂದು ಎನ್‌ಬಿಡಿಎಸ್‌ಎ ಪತ್ತೆ ಮಾಡಿದೆ. ವರದಿಯ ಸಂದರ್ಭ ಅಗತ್ಯವಾದ ‘‘ ನಿಷ್ಪಕ್ಷಪಾತ, ವಸ್ತುನಿಷ್ಠತೆ, ತಟಸ್ಥತೆಯ ಮೂಲಭೂತ ಸಿದ್ಧಾಂತವನ್ನು ಈ ಕಾರ್ಯಕ್ರಮದಲ್ಲಿ ಉಲ್ಲಂಘಿಸಲಾಗಿತ್ತು’’ ಎಂದು ಎನ್‌ಬಿಡಿಎಸ್‌ಎ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ ) ಎ.ಕೆ. ಸಿಕ್ರಿ ಹೇಳಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿ ಸಿಕ್ರಿ ವಾಹಿನಿಗೆ 50 ಸಾವಿರ ರೂ. ದಂಡ ವಿಧಿಸಿದ್ದಾರೆ ಹಾಗೂ, ವೆಬ್‌ಸೈಟ್‌ನಿಂದ ಈ ಕಾರ್ಯಕ್ರಮದ ವೀಡಿಯೊವನ್ನು ಅಳಿಸುವಂತೆ ಸೂಚಿಸಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಅನುಜ್ ದುಬೆ ಎಂಬವರು ದೂರು ಸಲ್ಲಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ಚೋಪ್ರಾ ಅವರು ಉದ್ದೇಶಪೂರ್ವಕವಾಗಿ ಮುಸ್ಲಿಂ ಸಮುದಾಯಕ್ಕೆ ಕಳಂಕ ಹಚ್ಚುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಎರಡನೇ ಕಾರ್ಯಕ್ರಮ ಗುಜರಾತ್‌ನ ಖೇಡಾದಲ್ಲಿ ಮುಸ್ಲಿಮ್ ವ್ಯಕ್ತಿಗಳಿಗೆ ಸಾರ್ವಜನಿಕವಾಗಿ ಥಳಿಸಿದ ಕುರಿತು ಅಕ್ಟೋಬರ್ 4ರಂದು ಚೋಪ್ರಾ ನಡೆಸಿದ ಇನ್ನೊಂದು ಲಘು ಚರ್ಚೆಗೆ ಸಂಬಂಧಿಸಿದ್ದು. ಮುಸ್ಲಿಂ ವ್ಯಕ್ತಿಗಳಿಗೆ ಸಾರ್ವಜನಿಕವಾಗಿ ಥಳಿಸಿರುವುದನ್ನು ‘ಪೊಲೀಸರ ದಾಂಡಿಯಾ’ ಎಂದು ಹೇಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿ ಇಂದ್ರಜಿತ್ ಘೋರ್ಪಡೆ ಎಂಬವರು ದೂರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಎನ್‌ಬಿಡಿಎಸ್‌ಎ ವಾಹಿನಿಗೆ 25,000 ರೂ. ದಂಡ ವಿಧಿಸಿತು.
ಮೂರನೆಯ ಕಾರ್ಯಕ್ರಮ ಕರ್ನಾಟಕದ ದಕ್ಷಿಣ ಕನ್ನಡ ಜೆಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಘಟಕದ ನಾಯಕ ಪ್ರವೀಣ ನೆಟ್ಟಾರು ಅವರನ್ನು ಹತ್ಯೆಗೈದ ಕುರಿತು ಜುಲೈ 28ರಂದು ಚೋಪ್ರಾ ನಿರೂಪಿಸಿದ ಕಾರ್ಯಕ್ರಮದ ಕುರಿತ ಆದೇಶ. ಈ ಕಾರ್ಯಕ್ರಮದ ಕುರಿತ ದೂರಿನಲ್ಲಿ ಜುಲೈ 19ರಿಂದ 28ರ ವರೆಗೆ ದಕ್ಷಿಣ ಕನ್ನಡದಲ್ಲಿ ಕೋಮು ಪ್ರೇರಿತ ಮೂರು ಹತ್ಯೆಗಳು ಸಂಭವಿಸಿದ್ದವು. ಆದರೆ ಚೋಪ್ರಾ ಅವರು ನೆಟ್ಟಾರು ಹತ್ಯೆ ಪ್ರಕರಣದ ಮೇಲೆ ಮಾತ್ರ ಬೆಳಕು ಚೆಲ್ಲಿದ್ದರು.
ಉಳಿದ ಎರಡು ಪ್ರಕರಣದಲ್ಲಿ ಮುಸ್ಲಿಮರು ಹತ್ಯೆಯಾಗಿದ್ದರು ಎಂದು ಹೇಳಿತ್ತು. ನಾಲ್ಕನೆಯ ಕಾರ್ಯಕ್ರಮ ಆಗಸ್ಟ್ 5ರಂದು ಪ್ರಸಾರವಾದ ‘‘ಘಾಝ್ವ್-ಎ-ಹಿಂದ್’’ ಹೆಸರಿನ ಚರ್ಚೆಯ ಕುರಿತಾದದ್ದು. ಇದು ಉತ್ತರ ಪ್ರದೇಶದಲ್ಲಿ ಹಾಗೂ ಬಾಂಗ್ಲಾದೇಶ, ನೇಪಾಳ ಗಡಿ ಜಿಲ್ಲೆಗಳಲ್ಲಿ ಮುಸ್ಲಿಮರ ಜನಸಂಖ್ಯೆ ತೀವ್ರ ಏರಿಕೆಯಾಗುತ್ತಿರುವ ಕುರಿತು ಪೊಲೀಸರು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದ ವರದಿಗೆ ಸಂಬಂಧಿಸಿತ್ತು.
ಈ ಸಂಬಂಧ ಕೂಡ ಎನ್‌ಬಿಡಿಎಸ್‌ಎ ದೂರು ಸಲ್ಲಿಸಲಾಗಿತ್ತು. ಸಂಪೂರ್ಣ ಕಾರ್ಯಕ್ರಮದಲ್ಲಿ ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿತ್ತು. ಈ ಕಾರ್ಯಕ್ರಮ ಕ್ಕೆ ಸಂಬಂಧಿಸಿ ವಾಹಿನಿಗೆ ಎನ್‌ಬಿಡಿಎಸ್‌ಎ 20 ಸಾವಿರ ರೂ. ದಂಡ ವಿಧಿಸಿತು ಹಾಗೂ ರಾಷ್ಟ್ರೀಯ ಪ್ರಾಮಖ್ಯತೆಯ ವಿಷಯಗಳ ಬಗ್ಗೆ ವರದಿ ಮಾಡುವಾಗ ಕೋಮು ಹೇಳಿಕೆಗಳನ್ನು ನೀಡದಂತೆ ಚೋಪ್ರಾ ಅವರಿಗೆ ನಿರ್ದೇಶಿಸಿತು







