ಡಿ.ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರೋಹಿಣಿ ಸಿಂಧೂರಿ: 1 ಕೋಟಿ ರೂ. ಪರಿಹಾರಕ್ಕೆ ಕೋರಿಕೆ

ಬೆಂಗಳೂರು, ಫೆ.28: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಪತಿ ಸುಧೀರ್ ರೆಡ್ಡಿ ಜೊತೆ ಖುದ್ದು ನಗರದ 24ನೆ ಎಸಿಎಂಎಂ ಕೋರ್ಟ್‍ಗೆ ಹಾಜರಾಗಿದ್ದ ರೋಹಿಣಿ ಸಿಂಧೂರಿ, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು.
'ತಡೆಯಾಜ್ಞೆ ಇದ್ದರೂ, ರೂಪಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಲೇ ಇದ್ದಾರೆ. ಅವಹೇಳನ ಬರವಣಿಗೆ ಪೋಸ್ಟ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಮಾತನಾಡಿದರೆ ಪರವಾಗಿಲ್ಲ, ಪದೇ ಪದೇ ನನ್ನನ್ನೇ ಗುರಿಯಿಟ್ಟುಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ನನ್ನ ಇಷ್ಟು ವರ್ಷಗಳ ಪ್ರಾಮಾಣಿಕ ಸರ್ಕಾರಿ ನೌಕರಿಯ ಸದ್ವರ್ತನೆಯನ್ನು ಪ್ರಶ್ನಿಸಿದ್ದಾರೆ. ಆದ್ದರಿಂದ, ನನಗಾಗಿರುವ ಮಾನನಷ್ಟಕ್ಕೆ ಪರಿಹಾರವಾಗಿ 1 ಕೋಟಿ ರೂ. ಕೊಡಿಸಿಕೊಡಬೇಕು ಮತ್ತು ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು' ಎಂದು ರೋಹಿಣಿ ಕೋರಿದ್ದಾರೆ.
ಚಾಮರಾಜನಗರ ಆಮ್ಲಜನಕ ಸಿಲಿಂಡರ್ ದುರಂತ ಪ್ರಕರಣದಲ್ಲಿ ಈಗಾಗಲೇ ಸರಕಾರ ತನಿಖೆ ನಡೆಸಿದೆ. ಸರಕಾರ ವರದಿ ನೀಡಿದ್ದರೂ ಉದ್ದೇಶ ಪೂರ್ವಕವಾಗಿ ಅವಮಾನ ಮಾಡುತ್ತಿದ್ದಾರೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.
ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠವು ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿತು.
ಇದನ್ನೂ ಓದಿ; ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಹತ್ಯೆ







