ಆಪ್ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ ತೊರೆದು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.
ಮಂಗಳವಾರ ಕಂದಾಯ ಸಚಿವ ಆರ್.ಅಶೋಕ ಅವರನ್ನು ಭೇಟಿ ಮಾಡಿದ್ದ ಭಾಸ್ಕರ್ ರಾವ್ ಬಳಿಕ ಅವರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಸೇರಿ ಹಲವು ನಾಯಕರ ಜತೆ ಮಾತುಕತೆ ನಡೆಸಿದ್ದರು.
ರಾಜಕೀಯ ಪಕ್ಷ ಸೇರಿ ಚುನಾವಣೆ ಸ್ಪರ್ಧಿಸುವ ಉದ್ದೇಶದಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಸ್ವೀಕಾರಗೊಂಡ ಬಳಿಕ ಅವರು 2022ರ ಎಪ್ರಿಲ್ 4ರಂದು ಆಮ್‍ಆದ್ಮಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು.ಇದೇ ಪಕ್ಷದಿಂದ ಬಸವನಗುಡಿಯಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಆದರೆ ಕಳೆದ ಒಂದೆರಡು ತಿಂಗಳಿಂದ ಅವರು ಪಕ್ಷದಲ್ಲಿ ಅಷ್ಟಾಗಿ ಸಕ್ರಿಯರಾಗಿರದೇ ತೆರೆಮರೆಯಲ್ಲಿ ಬಿಜೆಪಿ ಸೇರುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.
11 ತಿಂಗಳಿನಲ್ಲಿಯೇ ಪಕ್ಷ ತೊರೆದ ಭಾಸ್ಕರ್ ರಾವ್?
ಕಳೆದ 2022ನೆ ಸಾಲಿನ ಎಪ್ರಿಲ್ ನಾಲ್ಕು ರಂದು ಹೊಸದಿಲ್ಲಿಯ ಆಪ್ ಕಚೇರಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಮ್ಮುಖದಲ್ಲಿಯೇ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷ ಸೇರ್ಪಡೆಗೊಂಡಿದ್ದರು. ಆದರೆ, 11 ತಿಂಗಳಿನಲ್ಲಿಯೇ ಆಪ್ ಪಕ್ಷ ತೊರೆದದಿರುವುದು ಅಚ್ಚರಿ ತಂದಿದೆ.







