ದ.ಕ. ಜಿಲ್ಲೆಯಲ್ಲೂ ಸರಕಾರಿ ನೌಕರರ ಮುಷ್ಕರ

ಮಂಗಳೂರು, ಮಾ.1: ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು, 2022ರ ಜು.1ರಿಂದ ಜಾರಿಗೆ ಬರುವಂತೆ ಶೇ.40ರಷ್ಟು ವೇತನ ಹೆಚ್ಚಳ ಹಾಗೂ ಹಳೆ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂಬುದು ಆಗ್ರಹಿಸಿ ಸರಕಾರಿ ನೌಕರರ ಸಂಘದ ಸೂಚನೆಯಂತೆ ದ.ಕ. ಜಿಲ್ಲೆಯಲ್ಲಿ ಇಂದು ಬೆಳಗ್ಗಿನಿಂದ ಸರಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
ಜಿಲ್ಲೆಯಲ್ಲಿ ಬಹುತೇಕ ಕಚೇರಿಗಳು ಎಂದಿನಂತೆ ತೆರೆದಿವೆ. ಆದರೆ ಸಾರ್ವಜನಿಕರಿಗೆ ನೀಡುವ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಗ್ಯ ಇಲಾಖೆಯಲ್ಲಿ ತುರ್ತು ಸೇವೆ ಹೊರತುಪಡಿಸಿ ಸಿಬ್ಬಂದಿ ವರ್ಗವು ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿರುವುದು ಕಂಡುಬಂದಿದೆ. ನಗರದ ಲೋಕೋಪಯೋಗಿ ಇಲಾಖೆಯ ಕಚೇರಿಯ ಮುಂದೆ ನೌಕರರು ಜಮಾಯಿಸಿರುವುದು ಕಂಡುಬಂದಿದೆ.
ಉಳ್ಳಾಲ: ಉಳ್ಳಾಲ ತಾಲೂಕು ವ್ಯಾಪ್ತಿಯ ಸರಕಾರಿ ಶಾಲೆಗಳು ಶಿಕ್ಷಕರಿಲ್ಲದೇ ಮುಚ್ಚಿವೆ. ಬಬ್ಬುಕಟ್ಟೆ, ಕುತ್ತಾರ್, ತೊಕ್ಕೊಟು, ದೇರಳಕಟ್ಟೆ ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ಗೈರು ಹಾಜರಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮನೆಗೆ ಮರಳಿದ್ದಾರೆ.