ಸರಕಾರಿ ನೌಕರರ ಮುಷ್ಕರ: ಉಡುಪಿಯಲ್ಲಿ ಬಿಕೋ ಎನ್ನುತ್ತಿವೆ ಸರಕಾರಿ ಕಚೇರಿಗಳು

ಉಡುಪಿ, ಮಾ.1: ಏಳನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಾದ್ಯಂತ ಸರಕಾರಿ ನೌಕರರು ಹಮ್ಮಿಕೊಂಡ ಮುಷ್ಕರದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಸಂಕೀರ್ಣ ರಜತಾದ್ರಿ ಸೇರಿದಂತೆ ಬಹುತೇಕ ಸರಕಾರಿ ಕಚೇರಿಗಳು ನೌಕರರ ಗೈರು ಹಾಜರಿಯಿಂದ ಬಿಕೋ ಎನ್ನುತ್ತಿತ್ತು.
ಜಿಲ್ಲೆಯಲ್ಲಿ ಸುಮಾರು 12 ಸಾವಿರ ಸರಕಾರಿ ನೌಕರರಿದ್ದು, ಇವರೆಲ್ಲರು ಕರ್ತವ್ಯ ಹಾಜರಾಗದೆ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಎಲ್ಲ ಇಲಾಖೆಗಳ ಜಿಲ್ಲಾ ಕಚೇರಿಗಳಿದ್ದು, ಇಲ್ಲಿ ನೌಕರರು ಇಲ್ಲದೆ ಖಾಲಿಖಾಲಿಯಾಗಿರುವುದು ಕಂಡುಬಂತು.
ಮುಷ್ಕರದಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಕೂಡ ಭಾಗಿಯಾಗಿರುವುದರಿಂದ ಕೆಲವು ಶಾಲೆಗಳಿಗೆ ರಜೆ ಸಾರಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಹೊರಗುತ್ತಿಗೆ ನೌಕರರನ್ನು ಕರ್ತವ್ಯ ಹಾಜರಾಗದಂತೆ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಸೇರಿದಂತೆ ಪದಾಧಿಕಾರಿಗಳು ಮನವೊಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಇವರ ಮಧ್ಯೆ ವಾಗ್ವಾದಗಳು ನಡೆದವು. ಕೆಲವು ಹೊರಗುತ್ತಿಗೆ ನೌಕರರು ಹಾಜರಾತಿಯ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸಿದರು.
"ಜಿಲ್ಲೆಯಲ್ಲಿರುವ 12 ಸಾವಿರ ಸರಕಾರಿ ನೌಕರರಲ್ಲಿ ಬಹುತೇಕ ಮಂದಿ ಕರ್ತವ್ಯ ಹಾಜರಾಗದೆ ಮುಷ್ಕರ ನಡೆಸಿದ್ದಾರೆ. ಎಲ್ಲ ಸರಕಾರಿ ಕಚೇರಿಗಳು ಸ್ತಬ್ಧಗೊಂಡಿವೆ. ಈ ಮೂಲಕ ಅಸಹಕಾರ ಚಳವಳಿ ಮಾಡುತ್ತಿದ್ದೇವೆ. ಆದರೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಕೊಡುತ್ತಿಲ್ಲ. ಆಸ್ಪತ್ರೆಯ ರೋಗಿಗಳಿಗೆ, ತುರ್ತು ಸೇವೆಯಲ್ಲಿ ಯಾವುದೇ ತೊಂದರೆ ಆಗದಂತೆ ಕಪ್ಪು ಪಟ್ಟಿ ಧರಿಸಿ ವೈದ್ಯರು ಹಾಗೂ ದಾದಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ" ಎಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಅಂಪಾರು ತಿಳಿಸಿದರು.
‘ಉಡುಪಿ ಜಿಲ್ಲೆಯಲ್ಲಿ ಇಂದು ಸರಕಾರಿ ನೌಕರರ ಮುಷ್ಕರ ನಡೆಯುತ್ತಿದ್ದು, ಆರೋಗ್ಯ ಸೇವೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಬೇರೆ ಬೇರೆ ಸರಕಾರಿ ಕಚೇರಿಯಲ್ಲಿರುವ ಹೊರಗುತ್ತಿಗೆ ನೌಕರರ ಮೂಲಕ ಕೆಲವೊಂದು ಸೇವೆಗಳನ್ನು ಒದಗಿಸುವ ಪ್ರಯತ್ನ ನಡೆಯುತ್ತಿದೆ. ಆದಷ್ಟು ಬೇಗ ಮುಷ್ಕರ ಅಂತ್ಯಗೊಂಡು ಎಲ್ಲ ನೌಕರರು ಕರ್ತವ್ಯ ಹಾಜರಾಗ ಬಹುದು ಎಂಬುದು ನಮ್ಮ ವಿಶ್ವಾಸ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದರು.






.jpeg)
.jpeg)
.jpeg)
.jpeg)

