ವಿಕಾಸ್ ದುಬೆಯಂತೆ ಅತೀಕ್ ಅಹ್ಮದ್ ಕಾರು ಕೂಡ ಉರುಳಬಹುದು: ಬಿಜೆಪಿಯ ಸಂಸದನ ವಿವಾದಾತ್ಮಕ ಹೇಳಿಕೆ

ಲಕ್ನೋ: ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಅತೀಖ್ ಅಹ್ಮದ್ ಮತ್ತಾತನ ಕುಟುಂಬದ ವಿರುದ್ಧ ಪೊಲೀಸರ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಕನೌಜ್‌ನ ಬಿಜೆಪಿ ಸಂಸದ ಸುಬ್ರತ್ ಪಾಠಕ್ (BJP MP Subrata Pathak), "ಗ್ಯಾಂಗ್‌ಸ್ಟರ್ ವಿಕಾಸ್ ದುಬೆಗೆ (Vikas Dubey) ಮಾಡಿದಂತೆ ಅತೀಕ್ ಅಹ್ಮದ್‌ನ (Atiq Ahmed) ಕಾರನ್ನು ಉರುಳಿಸಿದರೆ ಅಚ್ಚರಿಯಾಗದು," ಎಂದು ಹೇಳಿದ್ದಾರೆ.
"ಉತ್ತರ ಪ್ರದೇಶ ಪೊಲೀಸರಿಂದ ಭದ್ರತೆ ಪಡೆಯುತ್ತಿದ್ದ ಉಮೇಶ್ ಪಾಲ್‌ನ ಹತ್ಯೆಯು ಉತ್ತರ ಪ್ರದೇಶ ಸರ್ಕಾರದ ಮೇಲಿನ ನೇರ ದಾಳಿಯಾಗಿದೆ. ವಿಕಾಸ್ ದುಬೆಯನ್ನು ಬಚಾವ್ ಮಾಡಲಾಗದೇ ಇದ್ದುದು ನೆನಪಿದೆಯೇ? ಈ ಅಪಘಾತಗಳ ನಂತರ ಏನಾಗುತ್ತದೆ ಎಂದು ಹೇಳುವ ಅಗತ್ಯವಿರುವುದಿಲ್ಲ. ಅತೀಖ್‌ನ ಕಾರು ಕೂಡ ಈಗ ಉರುಳಿದರೆ ಅಚ್ಚರಿ ಪಡಬೇಡಿ," ಎಂದು ಅವರು ಟ್ವೀಟ್ ಮಾಡಿದ್ದಾರೆ.
2020ರಲ್ಲಿ ನಡೆದ ಗ್ಯಾಂಗ್‌ಸ್ಟರ್ ವಿಕಾಸ್ ಯಾದವ್ ಎನ್‌ಕೌಂಟರ್ ಪ್ರಕರಣವನ್ನು ಪಾಠಕ್ ಉಲ್ಲೇಖಿಸುತ್ತಿದ್ದರು. ವಿಶೇಷ ಕಾರ್ಯಪಡೆಯ ಒಂದು ವಾಹನ ಉರುಳಿ ಬಿದ್ದಾಗ ವಿಕಾಸ್ ತಪ್ಪಿಸಲು ಯತ್ನಿಸಿದಾಗ ಪೊಲೀಸರು ಆತನನ್ನು ಗುಂಡಿಕ್ಕಿ ಹತ್ಯೆಗೈದಿದ್ದರು ಎಂದು ವರದಿಯಾಗಿತ್ತು. ಆತನನ್ನು ಪೊಲೀಸರನ್ನು ಕೊಂದ ಪ್ರಕರಣದಲ್ಲಿ ಜುಲೈ 3, 2020 ರಲ್ಲಿ ಬಂಧಿಸಲಾಗಿತ್ತು.
ಸೋಮವಾರ ರಾತ್ರಿ ಪ್ರಯಾಗರಾಜ್ ಪೊಲೀಸರು ಗ್ಯಾಂಗ್‌ಸ್ಟರ್, ರಾಜಕಾರಣಿ ಮತ್ತು ಸಮಾಜವಾದಿ ಪಕ್ಷದ ಮಾಜಿ ನಾಯಕ ಅತೀಕ್ ಅಹ್ಮದ್‌ನ ಲಕ್ನೋ ನಗರದ ಮಹಾನಗರ್ ಪ್ರದೇಶದ ನಿವಾಸದ ಮೇಲೆ ದಾಳಿ ನಡೆಸಿ ಎರಡು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು.
ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ, ವಕೀಲ ಉಮೇಶ್ ಪಾಲ್‌ನನ್ನು ಫೆಬ್ರವರಿ 24 ರಂದು ಪ್ರಯಾಗರಾಜ್‌ನಲ್ಲಿ ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಈ ದಾಳಿ ನಡೆದಿತ್ತು.
ಅತೀಕ್ ಅಹ್ಮದ್, ಆತನ ಪುತ್ರ ಅಸದ್ ಅಹ್ಮದ್, ಪತ್ನಿ ಹಾಗೂ ಬಿಎಸ್‌ಪಿ ನಾಯಕಿ ಶೈಸ್ತಾ ಪರ್ವೀನ್ ಅವರನ್ನು ಈ ಪ್ರಕರಣದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಪ್ರಯಾಗರಾಜ್‌ನ ಧೂಮನ್‌ಗಂಜ್‌ನ ನೆಹರೂ ಪಾರ್ಕ್ ಪ್ರದೇಶದಲ್ಲಿ ಸೋಮವಾರ ಗುಂಡಿನ ಚಕಮಕಿಯಲ್ಲಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಉಮೇಶ್ ಪಾಲ್ ಕೊಲೆ ನಡೆಸಲು ಬಳಸಲಾಗಿದ್ದ ಕಾರನ್ನು ಆರೋಪಿ ಅರ್ಬಾಝ್ ಚಲಾಯಿಸುತ್ತಿದ್ದಾಗ ಈ ಘಟನೆ ನಡೆದಿತ್ತು.
ಇದನ್ನೂ ಓದಿ: ವಿಶ್ವದ ನಂ.1 ಟೆಸ್ಟ್ ಬೌಲರ್ ಆಗಿ ಹೊರ ಹೊಮ್ಮಿದ ಆರ್. ಅಶ್ವಿನ್







