ರಾಜ್ಯದಲ್ಲಿ 4,120 ಮಹಿಳಾ ದೌರ್ಜನ್ಯ ಪ್ರಕರಣ ಇತ್ಯರ್ಥ : ಪ್ರಮೀಳಾ ನಾಯ್ಡು
ಮಹಿಳಾ ಆಯೋಗದಲ್ಲಿ ಮೂರು ವರ್ಷಗಳಲ್ಲಿ 6,728 ದೂರು ದಾಖಲು

ಮಂಗಳೂರು, ಮಾ.1: ಕರ್ನಾಟಕದಲ್ಲಿ 2020 ಮಾರ್ಚ್‌ನಿಂದ 2023 ಜನವರಿ ತನಕ ಮಹಿಳಾ ಆಯೋಗದಲ್ಲಿ 6728 ದೂರು ದಾಖಲಾಗಿದೆ. ಈ ಪೈಕಿ 4,120 ಪ್ರಕರಣಗಳ ಇತ್ಯರ್ಥಗೊಂಡಿವೆ. 2,608 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಾಗಿವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.
ದ.ಕ.ಜಿಲ್ಲಾ ಪಂಚಾಯತ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾನು ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನೆ ನಡೆಸಿರುವುದಾಗಿ ಹೇಳಿದರು.
ಮಹಿಳಾ ಆಯೋಗದಲ್ಲಿ ದೂರು ದಾಖಲಾದ 15 ರಿಂದ 20 ದಿನಗಳ ಒಳಗಾಗಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುತ್ತಿದೆ ಮತ್ತು ಸಮಸ್ಯೆಯ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ರಾಜ್ಯ ಮಹಿಳಾ ಆಯೋಗ ಪಾರದರ್ಶಕವಾಗಿ ಕಾರ್ಯನಿರ್ವಹಣೆಗೆ ಆದ್ಯತೆ ನೀಡಲಾಗಿದ್ದು, ಯಾವುದೇ ಲಂಚಕ್ಕೆ ಅವಕಾಶ ಇಲ್ಲ. ಯಾರು ಕೂಡಾ ಒಂದು ರೂಪಾಯಿ ಕೊಡಬೇಕಾಗಿಲ್ಲ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಲು ತಾನು ಶಕ್ತಿ ಮೀರಿ ಶ್ರಮಿಸಿರುವುದಾಗಿ ಹೇಳಿದರು.
ದ.ಕ.ಜಿಲ್ಲೆಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ
ದ.ಕ.ಜಿಲ್ಲೆಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿರುವುದು ಕಂಡು ಬಂದಿದೆ. ದ.ಕ.ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ಒಟ್ಟು 5 ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಗಳು ಕಾರ‌್ಯ ನಿರ್ವಹಿಸುತ್ತಿದೆ. ಈ ಕೇಂದ್ರಗಳಲ್ಲಿ ಮೂರು ವರ್ಷಗಳಲ್ಲಿ 1790 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ದ.ಕ.ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ಎಚ್.ಕೆ. ಉಪಸ್ಥಿತರಿದ್ದರು.