PFI ಪ್ರತಿಭಟನೆ, ಜನಸಂಖ್ಯೆ ಏರಿಕೆ ಕುರಿತ ವರದಿಗಳನ್ನು ತೆಗೆಯಲು Times Now, Zee Newsಗೆ ಎನ್ ಬಿಡಿಎಸ್ಎ ಆದೇಶ
ವರದಿ ಮಾಡುವಾಗ ಹೆಚ್ಚು ಜಾಗರೂಕವಾಗಿರುವಂತೆ ಎಚ್ಚರಿಕೆ ನೀಡಿದ ಪ್ರಾಧಿಕಾರ

ಹೊಸದಿಲ್ಲಿ: ಪಿಎಫ್ಐನಿಂದ ಪ್ರತಿಭಟನೆ ಮತ್ತು ದೇಶದ ಜನಸಂಖ್ಯೆ ಏರಿಕೆ ಕುರಿತು ವರದಿಗಾಗಿ ಸುದ್ದಿಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್ಬಿಡಿಎಸ್ಎ)ವು ಸುದ್ದಿ ವಾಹಿನಿಗಳಾದ ಟೈಮ್ಸ್ ನೌ ಮತ್ತು ಝೀ ನ್ಯೂಸ್ ವಿರುದ್ಧ ಆದೇಶಗಳನ್ನು ಹೊರಡಿಸಿದೆ.
ಭವಿಷ್ಯದಲ್ಲಿ ಇಂತಹ ವಿಷಯಗಳ ಮೇಲೆ ವರದಿ ಮಾಡುವಾಗ ಹೆಚ್ಚು ಜಾಗರೂಕವಾಗಿರುವಂತೆ ಟೈಮ್ಸ್ ನೌಗೆ ಎಚ್ಚರಿಕೆಯನ್ನು ನೀಡಿರುವ ಪ್ರಾಧಿಕಾರವು, ಪ್ರಸಾರದ ವೀಡಿಯೊ ಮತ್ತು ಅದಕ್ಕೆ ಎಲ್ಲ ಹೈಪರ್ಲಿಂಕ್ ಗಳನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಿದೆ.
ಟೈಮ್ಸ್ ನೌ ಸೆ.24ರಂದು ಪ್ರಸಾರ ಮಾಡಿದ್ದ ಸುದ್ದಿ ವರದಿಗೆ ಸಂಬಂಧಿಸಿದಂತೆ ಪ್ರಾಧಿಕಾರವು ಈ ಆದೇಶವನ್ನು ಹೊರಡಿಸಿದೆ. ಪುಣೆಯಲ್ಲಿ ಪಿಎಫ್ಐ ಪ್ರತಿಭಟನೆ ಸಂದರ್ಭದಲ್ಲಿ ‘ಪಾಕಿಸ್ತಾನ ಜಿಂದಾಬಾದ್ ’ಘೋಷಣೆಗಳನ್ನು ಕೂಗಲಾಗಿತ್ತು ಎಂದು ಟೈಮ್ಸ್ ನೌ ವರದಿ ಮಾಡಿತ್ತು, ಆದರೆ ಇದು ಸುಳ್ಳು ಎನ್ನುವುದನ್ನು ನಂತರ ಬಯಲಿಗೆಳೆಯಲಾಗಿತ್ತು.
ದೂರಿಗೆ ನೀಡಿದ್ದ ಉತ್ತರದಲ್ಲಿ ಟೈಮ್ಸ್ ನೌ, ತನ್ನ ವರದಿಯು ಎಎನ್ಐ ಮತ್ತು ಪಿಟಿಐ ಸೇರಿದಂತೆ ಸುದ್ದಿಸಂಸ್ಥೆಗಳು ಮತ್ತು ಇತರ ಫ್ರೀಲಾನ್ಸ್ ವರದಿಗಾರರು ಸೇರಿದಂತೆ ವಿವಿಧ ಮೂಲಗಳಿಂದ ಸ್ವೀಕರಿಸಿದ್ದ ಮಾಹಿತಿಗಳನ್ನು ಆಧರಿಸಿತ್ತು ಮತ್ತು ಸ್ಥಳದಲ್ಲಿ ತನ್ನ ಸ್ವಂತ ವರದಿಗಾರ ಉಪಸ್ಥಿತನಿರಲಿಲ್ಲ ಎಂದು ತಿಳಿಸಿತ್ತು.
ಆದರೆ ಸೆ.24ರಂದು ಬೆಳಿಗ್ಗೆ 10:06 ಘಂಟೆಗೆ ವಿಷಯವನ್ನು ತಾನೇ ಮೊದಲು ವರದಿ ಮಾಡಿದ್ದಾಗಿ ಸ್ವತಃ ವಾಹಿನಿಯೇ ತನ್ನ ವರದಿಯಲ್ಲಿ ಮತ್ತು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾಗಿ ಪ್ರಾಧಿಕಾರವು ಹೇಳಿದೆ.
ಪ್ರತಿಭಟನೆ ಸಂದರ್ಭದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆಗಳನ್ನು ಕೂಗಿರಲಿಲ್ಲ,‘ಪಿಎಫ್ಐ ಜಿಂದಾಬಾದ್’ ಘೋಷಣೆಗಳನ್ನು ಕೂಗಲಾಗಿತ್ತು ಎಂದು ಹಲವಾರು ಸತ್ಯ ಪರಿಶೀಲನೆ ವೆಬ್ಸೈಟ್ಗಳ ವರದಿಗಳನ್ನೂ ಪ್ರಾಧಿಕಾರವು ಗಮನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವೀಡಿಯೊದಲ್ಲಿ ತೋರಿಸಲಾಗಿದ್ದ ಘೋಷಣೆಗಳ ಕುರಿತು ತನಗೆ ಖಚಿತವಿಲ್ಲದಿದ್ದರೆ ವಿಷಯವನ್ನು ವರದಿ ಮಾಡುವಾಗ ಟೈಮ್ಸ್ ನೌ ಜಾಗ್ರತೆಯನ್ನು ವಹಿಸಬೇಕಿತ್ತು ಮತ್ತು ವೀಡಿಯೊದ ಅಧಿಕೃತತೆಗೆ ಸಂಬಂಧಿಸಿದಂತೆ ಡಿಸ್ಕ್ಲೇಮರ್ ಅಥವಾ ಹಕ್ಕು ನಿರಾಕರಣೆಯನ್ನು ಪ್ರದರ್ಶಿಸಬೇಕಿತ್ತು ಎಂದು ಪ್ರಾಧಿಕಾರವು ಹೇಳಿದೆ.
ಜನಸಂಖ್ಯೆ ಏರಿಕೆಗೆ ಕೋಮುಬಣ್ಣ ನೀಡಿದ್ದ ಝೀ ನ್ಯೂಸ್
ದೇಶದಲ್ಲಿ ಜನಸಂಖ್ಯೆ ಏರಿಕೆ ಕುರಿತು ತನ್ನ ವರದಿಯಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಮತ್ತು ವಿಷಯಕ್ಕೆ ಕೋಮುಬಣ್ಣ ನೀಡಲು ಆಯ್ದ ಅಂಕಿಅಂಶಗಳನ್ನು ಪ್ರಸಾರ ಮಾಡಿದ್ದಕ್ಕೆ ಪ್ರಾಧಿಕಾರವು ಝೀ ನ್ಯೂಸ್ ಅನ್ನು ಕಟುವಾಗಿ ಟೀಕಿಸಿದೆ.
ವರದಿಯ ಪ್ರಸಾರದಲ್ಲಿ ವಸ್ತುನಿಷ್ಠತೆ ಮತ್ತು ತಟಸ್ಥತೆಯ ಕೊರತೆಯಿತ್ತು. ಅದು ಜನಸಂಖ್ಯೆ ಬೆಳವಣಿಗೆಗೆ ಕೇವಲ ಒಂದು ಧರ್ಮವು ಹೊಣೆಗಾರನಾಗಿದೆ ಎಂದು ಬಿಂಬಿಸಿತ್ತು ಎಂದು ತನ್ನ ಆದೇಶದಲ್ಲಿ ಹೇಳಿರುವ ಪ್ರಾಧಿಕಾರವು, ಮುಸ್ಲಿಮ್ ಸಮಾವೇಶಗಳ ಸಂಬಂಧವಿಲ್ಲದ ದೃಶ್ಯಗಳನ್ನು ಪ್ರಸಾರ ಮಾಡುವ ಮತ್ತು ಹಿಂದು-ಮುಸ್ಲಿಮ್ ಜನಸಂಖ್ಯೆಯ ಕುರಿತು ಅಂಕಿಅಂಶಗಳನ್ನು ಆಯ್ದು ಹಂಚಿಕೊಳ್ಳುವ ಮೂಲಕ ಝೀ ನ್ಯೂಸ್ ಜನಸಂಖ್ಯಾ ಸ್ಫೋಟಕ್ಕೆ ಕೋಮುಬಣ್ಣವನ್ನು ನೀಡಿತ್ತು ಎಂದು ಬೆಟ್ಟು ಮಾಡಿದೆ.
ಭವಿಷ್ಯದಲ್ಲಿ ಇಂತಹ ವರದಿಗಳನ್ನು ಪ್ರಸಾರ ಮಾಡದಂತೆ ಝೀ ನ್ಯೂಸ್ಗೆ ಎಚ್ಚರಿಕೆಯನ್ನು ನೀಡಿರುವ ಪ್ರಾಧಿಕಾರವು, ತನ್ನ ವರದಿಯು ನೀತಿ ಸಂಹಿತೆಯನ್ನು ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದು ಕಂಡು ಬಂದಿದೆ ಎಂಬ ಸಂದೇಶವನ್ನು ಪ್ರಸಾರಿಸುವಂತೆ ಅದಕ್ಕೆ ಆದೇಶಿಸಿದೆ. ಕಾರ್ಯಕ್ರಮದ ವೀಡಿಯೊ ಮತ್ತು ಅದಕ್ಕೆ ಎಲ್ಲ ಹೈಪರ್ಲಿಂಕ್ಗಳನ್ನು ತೆಗೆದುಹಾಕುವಂತೆಯೂ ಅದು ವಾಹಿನಿಗೆ ನಿರ್ದೇಶನ ನೀಡಿದೆ.
ನ್ಯೂಸ್18ಗೆ ದಂಡ
ಸುದ್ದಿ ನಿರೂಪಕ ಅಮನ್ ಚೋಪ್ರಾರ ನಾಲ್ಕು ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಕುರಿತು ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಪ್ರಾಧಿಕಾರವು ಸೋಮವಾರ ನ್ಯೂಸ್18 ಇಂಡಿಯಾ ಹಿಂದಿ ಸುದ್ದಿವಾಹಿನಿಗೂ ದಂಡವನ್ನು ವಿಧಿಸಿದೆ. ಈ ಕಾರ್ಯಕ್ರಮಗಳು ಮುಸ್ಲಿಮರನ್ನು ಸಾರ್ವಜನಿಕವಾಗಿ ಥಳಿಸಿದ್ದನ್ನು ವೈಭವೀಕರಿಸಿದ್ದರಿಂದ ಹಿಡಿದು ಸಮುದಾಯದ ಜನಸಂಖ್ಯೆಯಲ್ಲಿ ಏರಿಕೆಯ ಕುರಿತು ಸುಳ್ಳು ಹೇಳಿಕೆಗಳವರೆಗೆ ವಿಷಯಗಳನ್ನು ಒಳಗೊಂಡಿದ್ದವು ಎಂದು ಪ್ರಾಧಿಕಾರವು ಹೇಳಿದೆ.







