ಭಾರತದಲ್ಲಿ ಮಾನವ ಕಳ್ಳ ಸಾಗಾಣಿಕೆ ಅತಿ ಹೆಚ್ಚು: ಅಮೆರಿಕ
"ಮಾನವ ಕಳ್ಳ ಸಾಗಾಣಿಕೆದಾರರ ದೋಷಮುಕ್ತಿ ದರವು ಶೇ.89ರಷ್ಟಿದೆ"

ಹೊಸದಿಲ್ಲಿ: ಭಾರತವು ಮಾನವ ಕಳ್ಳ ಸಾಗಾಣಿಕೆಯ ನಿರ್ಮೂಲನಕ್ಕಾಗಿ ಕನಿಷ್ಠ ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯು ಮಾನವ ಕಳ್ಳ ಸಾಗಾಣಿಕೆ ಕುರಿತು ತನ್ನ ವರದಿಯಲ್ಲಿ ಹೇಳಿದೆ. ಭಾರತದಲ್ಲಿಯ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜೀತ ಪದ್ಧತಿಯ ಯಾವುದೇ ಸಂತ್ರಸ್ತರನ್ನು ಗುರುತಿಸಿರುವುದನ್ನು ವರದಿ ಮಾಡಿಲ್ಲ ಅಥವಾ ಸಂಬಂಧಿತ ನಿಯಮಗಳಡಿ ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ, ಇದೇ ವೇಳೆ ಮಾನವ ಕಳ್ಳ ಸಾಗಾಣಿಕೆದಾರರ ದೋಷಮುಕ್ತಿ ದರವು ಶೇ.89ರಷ್ಟಿದೆ ಎಂದು ಅದು ಬೆಟ್ಟು ಮಾಡಿದೆ ಎಂದು newindianexpress.com ವರದಿ ಮಾಡಿದೆ.
ಸರಕಾರವು ಕಳ್ಳ ಸಾಗಾಣಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಸರಕಾರಿ ಅಧಿಕಾರಿಗಳ ವಿರುದ್ಧ ತನಿಖೆ, ಕಾನೂನು ಕ್ರಮಗಳನ್ನು ಕೈಗೊಂಡಿದ್ದನ್ನು ಅಥವಾ ದೋಷ ನಿರ್ಣಯಕ್ಕೊಳಪಡಿಸಿದ್ದನ್ನು ವರದಿ ಮಾಡಿಲ್ಲ ಎಂದೂ ಅಮೆರಿಕದ ವಿದೇಶಾಂಗ ಇಲಾಖೆಯು ಹೇಳಿದೆ. ಮಾನವ ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕಲು ಸರಕಾರವು ತನ್ನ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಪರಿಷ್ಕರಿಸಿಲ್ಲ ಅಥವಾ ಮಕ್ಕಳ ಲೈಂಗಿಕ ಕಳ್ಳ ಸಾಗಾಣಿಕೆಯಲ್ಲಿ ವಂಚನೆ ಅಥವಾ ಬಲವಂತವನ್ನು ಸಾಬೀತು ಪಡಿಸುವ ಅಗತ್ಯವನ್ನು ತೆಗೆದುಹಾಕಲು ಐಪಿಸಿಯ ಕಲಂ 37ಕ್ಕೆ ತಿದ್ದುಪಡಿಯನ್ನು ತಂದಿಲ್ಲ ಎಂಬ ನಿರಾಶೆಯನ್ನು ವರದಿಯು ವ್ಯಕ್ತಪಡಿಸಿದೆ. ಜೀತ ಪದ್ಧತಿಯನ್ನು ನಿವಾರಿಸಲು ಹಲವು ರಾಜ್ಯಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯು ರಾಷ್ಟ್ರವ್ಯಾಪಿ ಪ್ರಯತ್ನಗಳಿಗೆ ಅಡ್ಡಿಯನ್ನುಂಟು ಮಾಡಿದೆ ಎಂದೂ ವರದಿಯು ತಿಳಿಸಿದೆ. 2022ರಲ್ಲಿ 6,622 ಕಳ್ಳ ಸಾಗಾಣಿಕೆ ಬಲಿಪಶುಗಳನ್ನು ಮತ್ತು 694 ಸಂಭಾವ್ಯ ಕಳ್ಳ ಸಾಗಾಣಿಕೆ ಬಲಿಪಶುಗಳನ್ನು ಗುರುತಿಸಲಾಗಿದೆ, ಈ ಸಂಖ್ಯೆಗಳು 2019ರಲ್ಲಿ ಅನುಕ್ರಮವಾಗಿ 5,145 ಮತ್ತು 2,505 ಆಗಿದ್ದವು ಎಂದು ಅದು ಹೇಳಿದೆ.
2020ರಲ್ಲಿ ಸರಕಾರವು ಜೀತ ಪದ್ಧತಿಯಲ್ಲಿ 2,837 ಮತ್ತು ಲೈಂಗಿಕ ಕಳ್ಳ ಸಾಗಾಣಿಕೆಯಲ್ಲಿ 1,466 ಸೇರಿದಂತೆ ಕಾರ್ಮಿಕ ಕಳ್ಳ ಸಾಗಾಣಿಕೆಯಲ್ಲಿ 5,156 ಬಲಿಪಶುಗಳನ್ನು ಗುರುತಿಸಿತ್ತು,ಆದರೆ ಅದೇ ವರ್ಷ 694 ಸಂಭಾವ್ಯ ಬಲಿಪಶುಗಳಿಗೆ ಕಳ್ಳ ಸಾಗಾಣಿಕೆಯ ವಿಧವನ್ನು ಅದು ವರದಿ ಮಾಡಿರಲಿಲ್ಲ.
ತನ್ನ ವರದಿಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವಾರ್ಷಿಕ ವರದಿಯನ್ನು ಉಲ್ಲೇಖಿಸಿರುವ ಅಮೆರಿಕದ ವಿದೇಶಾಂಗ ಇಲಾಖೆಯು,ಜೀತ ಪದ್ಧತಿಯಡಿ ಸುಮಾರು ಎಂಟು ಕೋಟಿ ಭಾರತೀಯರು ದುಡಿಯುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದರೂ,1976ರಿಂದ ಕೇವಲ 3,13,962 ಜನರನ್ನು ಸರಕಾರವು ಗುರುತಿಸಿದೆ ಮತ್ತು ಅವರನ್ನು ರಕ್ಷಿಸಿದೆ ಎಂದು ಸಚಿವಾಲಯವು ತನ್ನ ವರದಿಯಲ್ಲಿ ತಿಳಿಸಿದೆ ಎಂದು ಹೇಳಿದೆ.
2021ರಲ್ಲಿ ಗುರುತಿಸಲಾಗಿದ್ದ ಜೀತದಾಳುಗಳ ಪೈಕಿ ಹೆಚ್ಚಿನವರು ಕರ್ನಾಟಕ (1,291),ತಮಿಳುನಾಡು (289) ಮತ್ತು ಉತ್ತರ ಪ್ರದೇಶ (1,026)ಕ್ಕೆ ಸೇರಿದವರಾಗಿದ್ದರು ಎಂದು ವರದಿಯು ತಿಳಿಸಿದೆ.
ಕೆಲವು ಕಳ್ಳ ಸಾಗಾಣಿಕೆದಾರರು ರೈಲ್ವೆ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಮಕ್ಕಳನ್ನು ಅಪಹರಿಸುತ್ತಾರೆ, ಬಾಲಕಿಯರಿಗೆ ಮಾದಕ ದ್ರವ್ಯಗಳನ್ನು ನೀಡಿ ಬಲೆಗೆ ಬೀಳಿಸುತ್ತಾರೆ ಮತ್ತು ಲೈಂಗಿಕ ಕಳ್ಳ ಸಾಗಾಣಿಕೆಗಾಗಿ ದೈಹಿಕವಾಗಿ ಬೆಳೆದಿರುವಂತೆ ಕಾಣಲು ಹಾರ್ಮೋನ್ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಲು ಐದರ ಹರೆಯದ ಬಾಲಕಿಯರನ್ನೂ ಬಲವಂತಗೊಳಿಸುತ್ತಾರೆ.
ಕಳ್ಳ ಸಾಗಾಣಿಕೆದಾರರು ಭಾರತೀಯ ಮತ್ತು ನೇಪಾಳಿ ಮಹಿಳೆಯರನ್ನು ಅಪಹರಿಸುತ್ತಾರೆ ಮತ್ತು ಅವರನ್ನು ಬಲವಂತದಿಂದ ಭಾರತದಲ್ಲಿ, ವಿಶೇಷವಾಗಿ ಬಿಹಾರದಲ್ಲಿ ‘ಆರ್ಕೆಸ್ಟ್ರಾ ಡ್ಯಾನ್ಸರ್ ’ಗಳಾಗಿ ದುಡಿಮೆಗೆ ಇಳಿಸುತ್ತಾರೆ. ಅಲ್ಲಿ ಈ ಮಹಿಳೆಯರು ಕಪೋಲಕಲ್ಪಿತ ಸಾಲಗಳು ತೀರುವವರೆಗೂ ಡ್ಯಾನ್ಸ್ ಗ್ರೂಪ್ಗಳಲ್ಲಿ ಕೆಲಸ ಮಾಡುತ್ತಾರೆ.
ಪ್ರಮುಖವಾಗಿ ಬಿಹಾರ, ಛತ್ತೀಸ್ಗಡ, ಜಾರ್ಖಂಡ್, ಒಡಿಶಾ ಮತ್ತು ಉತ್ತರ ಪ್ರದೇಶಗಳಲ್ಲಿಯ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರು ಕಾರ್ಮಿಕ ಕಳ್ಳ ಸಾಗಾಣಿಕೆ ಜಾಲಕ್ಕೆ ಹೆಚ್ಚಾಗಿ ಬಲಿಯಾಗುತ್ತಾರೆ ಎಂದು ವರದಿಯು ವಿವರಿಸಿದೆ.







