ಮಂಗಳೂರು: ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನ; ತಾಯಿ, ಮಗಳು ಮೃತ್ಯು
ಇನ್ನೋರ್ವ ಮಗಳು ಅಪಾಯದಿಂದ ಪಾರು

ಮಂಗಳೂರು, ಮಾ.1: ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ್‌ಗುತ್ತು ಬಳಿ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಗರದಲ್ಲಿ ನಡೆದಿದೆ.
ಆ ಪೈಕಿ ಮಹಿಳೆ ಮತ್ತು ಒಬ್ಬ ಪುತ್ರಿ ಮೃತಪಟ್ಟರೆ, ಇನ್ನೋರ್ವ ಪುತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋಡಿಯಾಲ್‌ಗುತ್ತು ನಿವಾಸಿ ವಿಜಯಾ (33) ಮತ್ತವರ ಮಗಳು ಶೋಭಿಖಾ (4) ಮೃತಪಟ್ಟವರು. ಈಕೆಯ 12 ವರ್ಷದ ಪುತ್ರಿ ಅಪಾಯದಿಂದ ಪಾರಾಗಿದ್ದಾಳೆ.
ವಿಜಯಾ ತನ್ನ ಮಕ್ಕಳಾದ ಶೋಭಿಖಾ ಮತ್ತು ಇನ್ನೋರ್ವಳ ಜೊತೆ ಮನೆಯಲ್ಲಿ ವಾಸವಾಗಿದ್ದರು. ಬುಧವಾರ ಮಧ್ಯಾಹ್ನ ಇಬ್ಬರು ಮಕ್ಕಳನ್ನು ಒಂದೇ ಕುಣಿಕೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದರು. ಈ ವೇಳೆ ಮತ್ತೋರ್ವ ಮಗಳು ಕುಣಿಕೆಯಿಂದ ತಪ್ಪಿಸಿಕೊಂಡಳೆಂದು ಪೊಲೀಸರು ತಿಳಿಸಿದ್ದಾರೆ.
ವಿಜಯಾರ ಪತಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ವಿಜಯಾ ತನ್ನಿಬ್ಬರು ಮಕ್ಕಳೊಂದಿಗೆ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ