ಕಾಂಗ್ರೆಸ್ ಬಿರುಗಾಳಿ ಎದುರು BJP ಹಾರಿಹೋಗಲಿದೆ: ಸಿದ್ದರಾಮಯ್ಯ

ಬೆಳಗಾವಿ, ಮಾ.1: ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಅಲ್ಲ, ಬಿರುಗಾಳಿ ಎದ್ದಿದೆ. ಆ ಬಿರುಗಾಳಿ ಎದುರು ಬಿಜೆಪಿ ಹಾರಿ ಹೋಗಲಿದೆ. ಅವರು ಯಾವ ಯಾತ್ರೆ ಮಾಡಿದರೂ, ಈಗಾಗಲೆ ಜನ ಅವರ ವಿರುದ್ಧ ತೀರ್ಮಾನ ಮಾಡಿ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬುಧವಾರ ನಗರದ ಸಾಂಬ್ರ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಳೆದ ಚುನಾವಣೆಯಲ್ಲಿ 600 ಭರವಸೆಗಳನ್ನು ನೀಡಿದ್ದರು. ಅದರಲ್ಲಿ ಎಷ್ಟು ಈಡೇರಿಸಿದ್ದಾರೆ, ಯಾವ ಯಾವ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಎಂದು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಅಚ್ಛೇ ದಿನ್ ಬರುತ್ತೆ, ರೈತರ ಆದಾಯ ದುಪ್ಪಟು ಆಗುತ್ತೆ, ಬೆಲೆ ಏರಿಕೆ ಕಡಿಮೆಯಾಗುತ್ತೆ ಎಂದು ಭರವಸೆ ನೀಡಿದರು. ಇದ್ಯಾವುದಾದರೂ ಆಗಿದೆಯೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ಓದಿ: ತಾಕತ್ತಿದ್ದರೆ ನಮ್ಮ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಿ: ವಿಪಕ್ಷಗಳಿಗೆ ಡಿ.ವಿ.ಸದಾನಂದ ಗೌಡ ಸವಾಲು
ಮೋದಿ ಬೆಳಗಾವಿಯಲ್ಲಿ ಬಂದು ರೋಡ್ ಶೋ ಮಾಡಿದ್ರು, ಮಹಾದಾಯಿ, ಕೃಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡಿದ್ರಾ? ದುಡ್ಡು ಕೊಟ್ಟು ಜನ ಕರೆದುಕೊಂಡು ಬಂದು ರೋಡ್ ಶೋ ಮಾಡಿದ್ರೆ ಬಡವರಿಗೇನು ಉಪಯೋಗ? ಕೊರೋನ ಬಂದಾಗ ಬೆಡ್, ಆಕ್ಸಿಜನ್ ಕೊಡಲಿಲ್ಲ. ಪ್ರವಾಹ ಬಂದಾಗ ರಾಜ್ಯಕ್ಕೆ ಬರದೆ ಈಗ ಚುನಾವಣೆ ಇದೆ ಎಂದು ವಾರಕ್ಕೊಮ್ಮೆ ಬರುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿದೆ ಎಂದು ಮೋದಿ ಆರೋಪಿಸಿದ್ದಾರೆ. ಹಾಗಾದರೆ, ಅಡ್ವಾಣಿ, ಮುರುಳಿ ಮನೋಹರ ಜೋಷಿಯನ್ನು ಮೂಲೆಗುಂಪು ಮಾಡಿದ್ದು ಯಾರು? ವೀರೇಂದ್ರ ಪಾಟೀಲ್ ಅವರಿಗೆ ಅನಾರೋಗ್ಯದ ಕಾರಣದಿಂದ ಅಧಿಕಾರದಿಂದ ಕೆಳಗಿಳಿಸಿದರು. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕಿತ್ತುಹಾಕಿದ್ದು ಯಾಕೆ?, ಪಾಪ ಅವರು ಕಣ್ಣೀರು ಹಾಕುವಂತೆ ಮಾಡಿದ್ದು ಇದೇ ಮೋದಿ ಮತ್ತು ಅಮಿತ್ ಶಾ ಅವರಲ್ವಾ? ಎಂದು ಅವರು ಪ್ರಶ್ನಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅವಮಾನ ಮಾಡಲಾಗಿದೆ ಅನ್ನೋದು ಹಾಸ್ಯಾಸ್ಪದ. ಅಲ್ಲದೆ, ಇದು ಮೋದಿ ಹೇಳಿರುವ ಮತ್ತೊಂದು ಸುಳ್ಳು. ಕೆಲವರು ತನ್ನ ಸಾವನ್ನು ಬಯಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಹಾಗಾಂತ ಯಾರು ಹೇಳಿದ್ದಾರೆ ಎಂದು ಹೇಳಲಿ. ಇನ್ನೂ ನನಗೆ ಹೇಳಿದ್ದಾರೆ, ಸಿದ್ದರಾಮಯ್ಯರನ್ನು ಒಡೆದು ಹಾಕಬೇಕು ಅಂತ. ಮೋದಿಗೆ ಆರೋಗ್ಯ ಚೆನ್ನಾಗಿರಲಿ, ಅವರು ಒಳ್ಳೆಯ ಕೆಲಸ ಮಾಡಿಲ್ಲ, ಕೊಟ್ಟಿದ್ದ ಭರವಸೆ ಈಡೇರಿಸಿಲ್ಲ ಎಂಬುದು ನಮ್ಮ ಆರೋಪ ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಲಕ್ಷ್ಮಿಹೆಬ್ಬಾಳ್ಕರ್, ಝಮೀರ್ ಅಹ್ಮದ್ ಖಾನ್, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.







