ಉಡುಪಿ: ಪ್ರತ್ಯೇಕ ಪ್ರಕರಣ; ಇಬ್ಬರಿಗೆ ಆನ್‌ಲೈನ್‌ನಲ್ಲಿ ಲಕ್ಷಾಂತರ ರೂ. ವಂಚನೆ

ಉಡುಪಿ, ಮಾ.1: ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡಿ ಇಬ್ಬರ ಖಾತೆಯಿಂದ ಲಕ್ಷಾಂತರ ರೂ. ಹಣ ವಂಚಿಸಿರುವ ಎರಡು ಪ್ರತ್ಯೇಕ ಪ್ರಕರಣಗಳು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಕುತ್ಪಾಡಿ ಗ್ರಾಮದ ಜನತಾ ಕಾಲೋನಿಯ ವಿಜಯ ಸುಚಿತ್ತ ಎಂಬವರ ಮಗ ರೊನಾಲ್ಡ್ ಜೆ.ಸುಚಿತ್ತ ಎಂಬವರಿಗೆ ಫೆ.28ರಂದು ಅಪರಿಚಿತ ವ್ಯಕ್ತಿಯೊಬ್ಬರು ಬ್ಯಾಂಕ್ ಅಧಿಕಾರಿ ಎಂದು ಹೇಳಿ ಕರೆ ಮಾಡಿ, ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್ಡೇಟ್ ಮಾಡಬೇಕು ಇಲ್ಲವಾದಲ್ಲಿ ಖಾತೆ ಬ್ಲಾಕ್ ಆಗುತ್ತದೆ ಎಂದು ಹೇಳಿದ್ದರು.
ಇದನ್ನು ನಂಬಿಸಿದ ರೊನಾಲ್ಡ್ ಬ್ಯಾಂಕ್ ವಿವರ, ಎ.ಟಿ.ಎಂ. ವಿವರ ಹಾಗೂ ಓ.ಟಿ.ಪಿ. ವಿವರವನ್ನು ನೀಡಿದರು. ಇದರಿಂದ ಅವರ ಖಾತೆಯಿಂದ ಒಟ್ಟು 1,94,000ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ, ಮೋಸ ಮಾಡಲಾಗಿದೆ ಎಂದು ದೂರಲಾಗಿದೆ.
ಅದೇ ರೀತಿ ಉಡುಪಿ ಗುಂಡಿಬೈಲಿನ ಭಾಸ್ಕರ ಸೇರಿಗಾರ ಎಂಬವರಿಗೆ ಮಾ.1ರಂದು ಬ್ಯಾಂಕ್ ಅಧಿಕಾರಿ ಹೇಳಿಕೊಂಡು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬರು ಕೂಡಲೇ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್ಡೇಟ್ ಮಾಡಬೇಕು ಇಲ್ಲವಾದಲ್ಲಿ ಖಾತೆ ಬ್ಲಾಕ್ ಆಗುತ್ತದೆ ಎಂದು ಹೇಳಿದರು. ಇದನ್ನು ನಂಬಿದ ಅವರು ಎಲ್ಲ ವಿವರಗಳನ್ನು ನೀಡಿದರು. ತಕ್ಷಣವೇ ಇವರ ಖಾತೆಯಿಂದ 99,000ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ, ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.







