ಹೆಬ್ರಿಯ ಶಿವಪುರದಲ್ಲಿ 67 ಎಕರೆ ಬೇನಾಮಿ ಆಸ್ತಿ ಖರೀದಿ: ಸಮಗ್ರ ತನಿಖೆಗೆ ಪ್ರಮೋದ್ ಮುತಾಲಿಕ್‌ರಿಂದ ಡಿಸಿಗೆ ಮನವಿ
"ಪ್ರಭಾವಿ ಸಚಿವರ ಶಾಮೀಲು ಶಂಕೆ"

ಉಡುಪಿ, ಮಾ.1: ಹೆಬ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಗಜಾನನ ಮತ್ತು ವಿದ್ಯಾ ಸುವರ್ಣ ಎಂಬವರ ಹೆಸರಿನಲ್ಲಿ 67.94 ಎಕರೆ ಜಾಗವನ್ನು 4.15 ಕೋಟಿ ರೂ.ಗೆ ಖರೀದಿ ಮಾಡಿದ್ದು, ಇವರಿಗೆ ಯಾವುದೇ ಆದಾಯ ಇಲ್ಲ. ಇವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿದ್ದು, ಇದರ ಹಿಂದೆ ‘ಪ್ರಭಾವಿ’ ಸಚಿವರ ಕೈವಾಡದ ಶಂಕೆ ಇದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಇದೀಗ ಇದೇ ಜಾಗವನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಖರೀದಿ ಬೆಲೆಗಿಂತ 5-6 ಪಟ್ಟು ಹೆಚ್ಚಿನ ಬೆಲೆಗೆ ಸರಕಾರ ಖರೀದಿ ಮಾಡುವ ಹಂತದಲ್ಲಿದೆ. ಇದರಿಂದ ಜಾಗಮೂಲದ ಮಾಲಕರಾದ ರೈತರಿಗೂ ಅನ್ಯಾಯವಾಗಿದೆ. ಇದು ಬೇನಾಮಿ ಆಸ್ತಿ ಎಂಬ ಸಂಶಯವಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪ್ರಮೋದ್ ಮುತಾಲಿಕ್ ಮನವಿಯ ಮೂಲಕ ಉಡುಪಿ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇನಾಮಿ ಆಸ್ತಿ ವ್ಯವಹಾರದ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರಿಗೆ ಮನವಿ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮುತಾಲಿಕ್, ಇಡೀ ಪ್ರಕರಣದಲ್ಲಿ ನಡೆದಿರುವ ಅವ್ಯವಹಾರವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಶಿವಪುರದಲ್ಲಿ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಖರೀದಿಸಿರುವ 67 ಎಕರೆ ಭೂಮಿ ಬೇನಾಮಿ ಆಸ್ತಿ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಬಿಜೆಪಿ ತಾಲೂಕು ಸಮಿತಿಯಲ್ಲಿರುವ ದಂಪತಿ ಹೆಸರಿನಲ್ಲಿ ಈ 67 ಎಕರೆ ಭೂಮಿ ಖರೀದಿಯಾಗಿದೆ. ಈ ಬೇನಾಮಿ ಆಸ್ತಿ ಖರೀದಿಯ ಹಿಂದೆ ‘ಪವರ್‌ಫುಲ್’ ಸಚಿವರ ಕೈವಾಡವಿರುವ ಬಲವಾದ ಶಂಕೆ ಇದೆ ಎಂದು ಗಂಭೀರ ಆರೋಪ ಮಾಡಿದರು.
ಈ ಜಾಗದಲ್ಲಿ ಸರಕಾರ ‘ಕೈಗಾರಿಕಾ ವಲಯ’ ಪ್ರಾರಂಭಿಸಲಿದೆ ಎಂದು ಗೊತ್ತಿದ್ದೇ ಭೂಮಿಯನ್ನು ಖರೀದಿಸಲಾ ಗಿದೆ. ಇದಾದ ಕೆಲವೇ ದಿನಗಳಲ್ಲಿ ಸರಕಾರ ಜಾಗವನ್ನು ಇಂಡಸ್ಟ್ರಿಯಲ್ ಏರಿಯಾ ಎಂದು ಘೋಷಿಸಿದೆ. ಇದರಿಂದ ಜಾಗದ ಬೆಲೆ ನಾಲ್ಕೈದು ಪಟ್ಟು ಹೆಚ್ಚಾಗಿದೆ. ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲಿ ಸಚಿವರ ಪ್ರಭಾವ ವ್ಯವಸ್ಥಿತವಾಗಿ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಬಗ್ಗೆ ತಮ್ಮಲ್ಲಿ ದಾಖಲೆಗಳಿದ್ದು ಸಮಗ್ರ ತನಿಖೆ ನಡೆಸಬೇಕು ಎಂದು ಎಂದು ಮುತಾಲಿಕ್ ಹೇಳಿದರು.
ರಾಜಕೀಯ ಪ್ರಭಾವ ಬಳಸಿ ಜಮೀನಿನ ಮೂಲ ಮಾಲಕರ ಮೇಲೆ ಒತ್ತಡ ಹೇರಿ ಕಡಿಮೆ ಬೆಲೆಗೆ ಭೂಮಿ ಖರೀದಿಸಿರುವ ಶಂಕೆ ಇದೆ. ಸರಕರಾ ನೇರವಾಗಿ ರೈತರಿಂದ ಕೈಗಾರಿಕಾ ವಲಯ ನಿರ್ಮಾಣಕ್ಕೆ ಭೂಮಿ ಖರೀದಿಸ ಬಹುದಿತ್ತು. ಆದರೆ ಇದೀಗ ಖಾಸಗಿಯವರಿಂದ ನಾಲ್ಕೈದು ಪಟ್ಟು ಹೆಚ್ಚು ಬೆಲೆಗೆ ಖರೀದಿಸುತ್ತಿರುವುದು ಷಡ್ಯಂತ್ರದಂತೆ ತೋರುತ್ತಿದೆ ಎಂದರು.
ಜಿಲ್ಲಾಧಿಕಾರಿಗಳು ಕೂಡಲೇ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಿ ಬೇನಾಮಿ ಆಸ್ತಿಯ ಮಾಲಕರನ್ನು ಪತ್ತೆ ಹಚ್ಚಬೇಕು. ಸಂಬಂಧಪಟ್ಟ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಜೊತೆಗೆ ಆದಾಯ ತೆರಿಗೆ ಇಲಾಖೆ ಹಾಗೂ ಲೋಕಾಯುಕ್ತಕ್ಕೂ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿರುವ ಮುತಾಲಿಕ್, ಸದ್ಯ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಬಿಜೆಪಿಯ ಸಚಿವ ಸುನಿಲ್ ಕುಮಾರ್ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಇದು ಮುಂದಿನ ಅಖಾಡಕ್ಕೆ ವೇದಿಕೆಯನ್ನು ಸಜ್ಜುಗೊಳಿಸುವಂತೆ ತೋರುತ್ತಿದೆ.









