1901ರಿಂದ ದೇಶದಲ್ಲಿ ಅತ್ಯಂತ ಹೆಚ್ಚಿನ ತಾಪಮಾನ ಫೆಬ್ರವರಿಯಲ್ಲಿ ದಾಖಲು

ಹೊಸದಿಲ್ಲಿ,ಮಾ.1: 1901ರಲ್ಲಿ ಸೂಕ್ತ ದಾಖಲೆಗಳ ನಿರ್ವಹಣೆ ಆರಂಭವಾದಾಗಿನಿಂದ ದೇಶಾದ್ಯಂತ ಅತ್ಯಂತ ಹೆಚ್ಚಿನ ಸರಾಸರಿ ತಾಪಮಾನ (29.5 ಡಿ.ಸೆ.)ವು ಫೆಬ್ರವರಿ ತಿಂಗಳಲ್ಲಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ತಿಳಿಸಿದೆ. ಮಾರ್ಚ್-ಮೇ ಅವಧಿಯಲ್ಲಿ ಭಾರತದ ಅನೇಕ ಭಾಗಗಳು ಸಾಮಾನ್ಯ ಬೇಸಿಗೆಗಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸಲಿವೆ ಎಂಬ ಸಂಕೇತವನ್ನೂ ಅದು ನೀಡಿದೆ.
ತನ್ನ ಬೇಸಿಗೆ ಮುನ್ಸೂಚನೆಯಲ್ಲಿ ಐಎಂಡಿಯು,ಈಶಾನ್ಯ,ಪೂರ್ವ, ಮಧ್ಯ ಮತ್ತು ದಿಲ್ಲಿ-ಎನ್ಸಿಆರ್ ಸೇರಿದಂತೆ ವಾಯುವ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಹಗಲಿನ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿರುವ ನಿರೀಕ್ಷೆಯಿದೆ. ಮುಂಬರುವ ಬೇಸಿಗೆಯು ಕಳೆದ ವರ್ಷಕ್ಕಿಂತ ಹೆಚ್ಚಿನ ಉಷ್ಣ ಮಾರುತ ದಿನಗಳಿಗೆ ಸಾಕ್ಷಿಯಾಗಲಿದೆ. ದಕ್ಷಿಣ ಭಾರತದಲ್ಲಿ ಮತ್ತು ಮಹಾರಾಷ್ಟ್ರದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಬೇಸಿಗೆ ತಾಪಮಾನವಿರುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇಡೀ ಭಾರತದ ಜೊತೆಗೆ ಕಳೆದ ಫೆಬ್ರವರಿಯು ದಾಖಲೆಯಂತೆ ಈಶಾನ್ಯ ಭಾರತದಲ್ಲಿ ಅತ್ಯಂತ ಹೆಚ್ಚಿನ ತಾಪಮಾನವಿದ್ದ ತಿಂಗಳಾಗಿದ್ದು,ಸರಾಸರಿ ಹಗಲಿನ ತಾಪಮಾನವು ಸಾಮಾನ್ಯಕ್ಕಿಂತ 3.4 ಡಿ.ಸೆ.ಗಿಂತ ಅಧಿಕವಾಗಿತ್ತು ಮತ್ತು ಮಧ್ಯಭಾರತವು ತನ್ನ ಎರಡನೇ ಅತ್ಯಂತ ಬಿಸಿಯಾದ ಫೆಬ್ರವರಿಗೆ ಸಾಕ್ಷಿಯಾಗಿತ್ತು,ಅಲ್ಲಿ ಸರಾಸರಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿ.ಸೆ.ಅಧಿಕವಾಗಿತ್ತು ಎಂದು ಐಎಂಡಿ ತಿಳಿಸಿದೆ.
ಮುಂಬರುವ ಬೇಸಿಗೆಯಲ್ಲಿ ದೇಶದ ಹಲವಾರು ಭಾಗಗಳಲ್ಲಿ ಹೆಚ್ಚಿನ ಉಷ್ಣ ಮಾರುತ ದಿನಗಳ ಬಗ್ಗೆಯೂ ಎಚ್ಚರಿಕೆ ನೀಡಿರುವ ಐಎಂಡಿ,ಮಾರ್ಚ್-ಮೇ ಅವಧಿಯಲ್ಲಿ ಮಧ್ಯಭಾರತ ಮತ್ತು ನೆರೆಯ ವಾಯವ್ಯ ಭಾರತದ ಹಲವು ಪ್ರದೇಶಗಳಲ್ಲಿ ಉಷ್ಣ ಮಾರುತಗಳು ಬೀಸುವ ಹೆಚ್ಚಿನ ಸಾಧ್ಯತೆಯಿದೆ ಎಂದು ಹೇಳಿದೆ.
ಫೆಬ್ರವರಿಯಲ್ಲಿ ಇಷ್ಟೊಂದು ಹೆಚ್ಚಿನ ತಾಪಮಾನ ಮತ್ತು ಬಿರುಬಿಸಿಲಿನ ಬೇಸಿಗೆ ದಿನಗಳ ಮುನ್ಸೂಚನೆಯ ಹಿಂದಿನ ಕಾರಣ ಹವಾಮಾನ ಬದಲಾವಣೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಐಎಂಡಿ ವಿಜ್ಞಾನಿ ಎಸ್.ಸಿ.ಭಾನ್ ಅವರು,ಇಡೀ ವಿಶ್ವವೇ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಯುಗದಲ್ಲಿ ಬದುಕುತ್ತಿದೆಯಾದರೂ ಹವಾಮಾನ ಬದಲಾವಣೆಗೆ ನೇರವಾಗಿ ಸಂಬಂಧ ಕಲ್ಪಿಸುವುದು ಸಾಮಾನ್ಯವಾಗಿ ವಿಶ್ಲೇಷಣೆಯ ವಿಷಯವಾಗಿದೆ. ಅದು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನ ಬದಲಾವಣೆಯ ಭಾಗವಾಗಿರಬಹುದು ಅಥವಾ ಭಾಗವಲ್ಲದಿರಬಹುದು ಎಂದು ತಿಳಿಸಿದರು.
ಕೃಷಿಯ ಮೇಲೆ ಅಧಿಕ ತಾಪಮಾನದ ಪರಿಣಾಮ ಕುರಿತಂತೆ ಭಾನ್,ಪ್ರತಿಕೂಲ ಹವಾಮಾನ ಸಂದರ್ಭಗಳಲ್ಲಿ ರೈತರಿಗೆ ವಿಸ್ತರಣಾ ಸೇವೆಗಳು ಮತ್ತು ಬೆಂಬಲದೊಂದಿಗೆ ಕೃಷಿ ಸಚಿವಾಲಯವು ಸಜ್ಜಾಗಿದೆಯಾದರೂ ಈವರೆಗೆ ಕೃಷಿ ಕಾರ್ಯಾಚರಣೆಗಳ ಮೇಲೆ ಪ್ರತಿಕೂಲ ತಾಪಮಾನದ ಪರಿಣಾಮ ವರದಿಯಾಗಿಲ್ಲ ಎಂದರು.
ಮಾನ್ಸೂನ್ ಸ್ಥಿತಿಯ ಕುರಿತಂತೆ ಭಾನ್,‘ನಾವು ಎಪ್ರಿಲ್ ಮಧ್ಯದಲ್ಲಿ ಮುನ್ಸೂಚನೆಯನ್ನು ಹೊರಡಿಸುತ್ತೇವೆ. ಮಳೆಯು ಒಂದು ಮಾನದಂಡವನ್ನು ಅವಲಂಬಿಸಿಲ್ಲ. ಎಪ್ರಿಲ್ನಲ್ಲಿ ಇತರ ಮಾನದಂಡಗಳ ಬಗ್ಗೆ ಹೆಚ್ಚಿನ ಖಚಿತತೆಯು ದೊರೆಯುತ್ತದೆ ಮತ್ತು ಅವುಗಳ ಸಂಯೋಜಿತ ಪರಿಣಾಮವನ್ನು ಅಧ್ಯಯನ ಮಾಡಿ ಮುನ್ಸೂಚನೆಯನ್ನು ಹೊರಡಿಸುತ್ತೇವೆ ’ಎಂದರು.
ಮಾರ್ಚ್-ಮೇ ನಡುವಿನ ಅವಧಿಯಲ್ಲಿ ರಾತ್ರಿ ತಾಪಮಾನ ಕುರಿತಂತೆ ಭಾನ್,ದಕ್ಷಿಣ ಭಾರತವನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ತಾಪಮಾನವಿರಲಿದೆ. ದಕ್ಷಿಣ ಭಾರತದಲ್ಲಿ ರಾತ್ರಿ ತಾಪಮಾನ ಸಾಮಾನ್ಯದಿಂದ ಸಾಮಾನ್ಯ ಕನಿಷ್ಠ ಮಟ್ಟಕ್ಕಿಂತ ಕಡಿಮೆಯಿರುವ ಸಾಧ್ಯತೆಯಿದೆ ಎಂದರು.







