ಕಿನ್ನಿಗೋಳಿ: ಖಿಲ್ರಿಯಾ ಜುಮಾ ಮಸೀದಿಗೆ ಸುವರ್ಣ ಮಹೋತ್ಸವ ಸಂಭ್ರಮ; ಲೋಗೋ ಬಿಡುಗಡೆ

ಕಿನ್ನಿಗೋಳಿ: ಪರಸ್ಪರ ಸಹಕಾರ, ಮಾನವೀಯತೆ, ಭ್ರಾತೃತ್ವದ ಗುಣಗಳನ್ನು ನಾವೆಂದೂ ಬಿಟ್ಟು ಕೊಡಬಾರದು. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ವಿಚಾರಗಳಿಗೆ ನಾವು ಹೆಚ್ಚು ಹತ್ತಿರವಾಗಿರಬೇಕು ಎಂದು ಧಾರ್ಮಿಕ ವಿದ್ವಾಂಸ ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹೇಳಿದರು.
ಖಿಲ್ರಿಯಾ ಜುಮಾ ಮಸೀದಿ ಶಾಂತಿನಗರ, ಗುತ್ತಕಾಡು ಇದರ ಸುವರ್ಣ ಮಹೋತ್ಸವ ಸಂಭ್ರಮದ ಉದ್ಘಾಟನಾ ಸಮಾರಂಭ ಹಾಗೂ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ʼʼಐವತ್ತು ವರುಷ ಅನ್ನೋದು ಸುದೀರ್ಘ ಪಯಣ. ಮಸೀದಿಯೊಂದು ಈ ಮಟ್ಟಿಗೆ ಬೆಳೆದು ನಿಲ್ಲಲು ಜಮಾಅತ್ ನ ಹಿರಿಯರ ಸೇವೆ ಅತ್ಯಮೂಲ್ಯ. ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ಕ್ಷಣಮಾತ್ರದಲ್ಲಿ ಸಾಧ್ಯವಾಗುತ್ತಿದೆ, ಆದರೆ ನೈತಿಕ ಮೌಲ್ಯ ಅನ್ನೋದು ಪ್ರಶ್ನಾರ್ಥಕವಾಗಿ ಕಾಣುತ್ತಿದೆ. ಶ್ರೀಕೃಷ್ಣನು ಅರ್ಜುನನಿಗೆ ಹೇಳಿದಂತೆ ನಾವೆಲ್ಲರೂ ಹೃದಯಲ್ಲಿರುವ ದೌರ್ಬಲ್ಯಗಳನ್ನು ದೂರೀಕರಿಸಿ ಅದರಿಂದ ಹೊರಬರಬೇಕಿದೆ. ಪ್ರವಾದಿ ಮುಹಮ್ಮದ್ (ಸ.ಅ) ಅವರ ಸಂದೇಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕಿದೆ” ಎಂದರು.
ಮೂಕಾಂಬಿಕಾ ದೇವಸ್ಥಾನ ಶಾಂತಿನಗರ ಇದರ ಧರ್ಮದರ್ಶಿ ವಿವೇಕಾನಂದ ಮಾತನಾಡಿ, ʼʼಗುತ್ತಕಾಡು ಎಂಬ ಹೆಸರಿದ್ದ ಈ ಊರಿಗೆ ನಾವೆಲ್ಲ ಹಿರಿಯರು ಸೇರಿ ಶಾಂತಿನಗರ ಎಂಬ ಹೆಸರನ್ನ ಇರಿಸಿದೆವು. ಆ ಹೆಸರಿಗೆ ಪೂರಕವೆನ್ನುವಂತೆ ಇಂದಿಗೂ ಈ ಊರಿನ ಮಂದಿ ನಡೆದುಕೊಂಡು ಬಂದಿದ್ದಾರೆ. ತೀರಾ ಹಿಂದುಳಿದಿದ್ದ ಪ್ರದೇಶವು ಇಂದು ಸಾಕಷ್ಟು ಅಭಿವೃದ್ಧಿ ಕಂಡಿದೆ. ಪರಸ್ಪರ ಸಹಬಾಳ್ವೆ, ಸಹಕಾರ ಇಂದಿಗೂ ಕಾಣಬಹುದಾಗಿದೆ. ಮಸೀದಿ, ಮಂದಿರಗಳು ಈ ಊರನ್ನು ಬೆಳಗುತ್ತಿದ್ದು, ಇದು ಹೀಗೆಯೇ ಮುಂದುವರೆಯಲಿʼʼ ಎಂದು ಶುಭ ಹಾರೈಸಿದರು.
ಇದೇ ಸಂದರ್ಭ ಸುವರ್ಣ ಮಹೋತ್ಸವದ ಲೋಗೋ ಹಾಗೂ ಕಾರ್ಯಕ್ರಮಗಳ ವಿವರ ಪಟ್ಟಿಯನ್ನು ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಅವರು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.
ಅನಂತರ ಈ ಹಿಂದೆ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮೀರಾ ಸಾಬ್, ಹಾಜಿ ಟಿ.ಹೆಚ್. ಮಯ್ಯದ್ದಿ, ಅಸ್ಕರ್ ಅಲಿ, ಟಿ.ಕೆ. ಅಬ್ದುಲ್ ಖಾದರ್, ಕೆ. ಮೊಯ್ದಿನಬ್ಬ, ಹಾಜಿ ಅಬ್ದುಲ್ ರಹ್ಮಾನ್, ಟಿ.ಎ. ಹನೀಫ್ ಹಾಗೂ ಪ್ರಸ್ತುತ ಅಧ್ಯಕ್ಷ ಜೆ.ಹೆಚ್. ಅಬ್ದುಲ್ ಜಲೀಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಹೆಚ್. ಅಬ್ದುಲ್ ಜಲೀಲ್ ವಹಿಸಿದ್ದರು. ಮಸೀದಿಯ ಖತೀಬರು ಉಮರುಲ್ ಫಾರೂಕ್ ಸಖಾಫಿ ದುವಾ ಆಶೀರ್ವಚನ ನೆರವೇರಿಸಿದರು. ಕೆಜೆಎಂ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅಬ್ದುಲ್ ಖಾದರ್ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಹಾಜಿ ಟಿ.ಹೆಚ್. ಮಯ್ಯದ್ದಿ, ಕಾರ್ಯದರ್ಶಿ ಎಸ್. ಅಬ್ದುಲ್ ರಝಾಕ್, ಕಿನ್ನಿಗೋಳಿ ಜುಮ್ಮಾ ಮಸೀದಿ ಖತೀಬರು ಅಬ್ದುಲ್ ಲತೀಫ್ ಸಖಾಫಿ, ಪುನರೂರು ಮಸೀದಿ ಖತೀಬರು ಮುಹಮ್ಮದ್ ಅಶ್ರಫ್ ಸಅದಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ನೂರುಲ್ ಹುದಾ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಖಾದರ್, ಮದ್ರಸ ಕಟ್ಟಡ ಸಮಿತಿ ಕಾರ್ಯದರ್ಶಿ ಟಿ.ಎ. ಹನೀಫ್, ಹೆಚ್.ಐ.ಎಂ ಸದರ್ ಉಸ್ತಾದ್ ಸುಹೈಲ್ ಸಖಾಫಿ, ಸಹ ಉಸ್ತಾದ್ ನೌಫಲ್ ಸಖಾಫಿ ಅಲ್ಹಿಕಮಿ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು. ಜೆಹೆ.ಚ್. ಅಬ್ದುಲ್ ಜಲೀಲ್ ಸ್ವಾಗತಿಸಿ, ಅಬ್ದುಲ್ ರಝಾಕ್ ವಂದಿಸಿದರು. ಮುಹಮ್ಮದ್ ಇರ್ಷಾದ್ ನಿರೂಪಿಸಿದರು.