ಗ್ರೀಸ್: ಭೀಕರ ರೈಲು ಅಪಘಾತದಲ್ಲಿ ಕನಿಷ್ಟ 36 ಮಂದಿ ಮೃತ್ಯು

ಅಥೆನ್ಸ್, ಮಾ.1: ಗ್ರೀಸ್ ನಲ್ಲಿ ಮಂಗಳವಾರ ಪ್ರಯಾಣಿಕರ ರೈಲು ಹಾಗೂ ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿ ಕನಿಷ್ಟ 36 ಮಂದಿ ಮೃತಪಟ್ಟಿದ್ದಾರೆ. ಇತರ 85 ಮಂದಿ ಗಾಯಗೊಂಡಿದ್ದು ಅಪಘಾತದಿಂದಾಗಿ ರೈಲು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಗಾಯಗೊಂಡವರಲ್ಲಿ 6 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಸ್ಥಳೀಯ ಕಾಲಮಾನ ರಾತ್ರಿ 7:30ರ ವೇಳೆ ಪ್ರಯಾಣಿಕರ ರೈಲು ಅಥೆನ್ಸ್ ನಿಲ್ದಾಣದಿಂದ ಪ್ರಯಾಣ ಮುಂದುವರಿಸಿತ್ತು. ಗೂಡ್ಸ್ ರೈಲು ಥೆಸಲೊನಿಕಿಯಿಂದ ಲರಿಸ್ಸಾದತ್ತ ತೆರಳುತ್ತಿತ್ತು. ಎರಡೂ ರೈಲುಗಳು ಏಕಕಾಲಕ್ಕೆ ಒಂದೇ ಹಳಿಯಲ್ಲಿ ಸಂಚರಿಸುತ್ತಿದ್ದು ಸುರಂಗ ಮಾರ್ಗವೊಂದರಿಂದ ಪ್ರಯಾಣಿಕರ ರೈಲು ಹೊರಬರುತ್ತಿದ್ದಂತೆಯೇ ಎದುರುಗಡೆಯಿಂದ ಬಂದ ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿದೆ.
ಪ್ರಯಾಣಿಕರ ರೈಲಿನಲ್ಲಿದ್ದ 350 ಪ್ರಯಾಣಿಕರಲ್ಲಿ 250 ಪ್ರಯಾಣಿಕರನ್ನು ದುರಂತದ ಸ್ಥಳದಿಂದ ಸುರಕ್ಷಿತವಾಗಿ ತೆರವುಗೊಳಿಸಿ ಬಸ್ಸುಗಳ ಮೂಲಕ ಥೆಸಲೊನಿಕಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮ ವರದಿ ಹೇಳಿದೆ. 1972ರಲ್ಲಿ ಲರಿಸ್ಸಾ ನಗರದ ಹೊರಭಾಗದಲ್ಲಿ 2 ರೈಲುಗಳ ಮುಖಾಮುಖಿ ಅಪಘಾತದಲ್ಲಿ 19 ಪ್ರಯಾಣಿಕರು ಮೃತಪಟ್ಟಿದ್ದರು.
ಅಪಘಾತದ ತೀವ್ರತೆಗೆ ಪ್ರಯಾಣಿಕರ ರೈಲು ಹಳಿತಪ್ಪಿ ಮಗುಚಿಬಿದ್ದಿದ್ದು ರೈಲಿನ ಕಿಟಕಿಗಳು ನಜ್ಜುಗುಜ್ಜಾಗಿವೆ. ರೈಲಿನ ಒಂದು ಬೋಗಿ ಹಳಿಯಲ್ಲಿ 90 ಡಿಗ್ರಿಯಷ್ಟು ನೇರ ನಿಂತಿದೆ. ಭೀಕರ ಸದ್ದಿನೊಂದಿಗೆ ಭಾರೀ ಬೆಂಕಿ ಕಾಣಿಸಿಕೊಂಡಾಗ ಪ್ರಯಾಣಿಕರು ಗಾಭರಿಯಿಂದ ಕಿರುಚುತ್ತಾ ರೈಲಿನ ಕಿಟಕಿ ಬಾಗಿಲನ್ನು ಮುರಿದು ಹೊರಬರುವ ಪ್ರಯತ್ನ ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು, ಅವಶೇಷಗಳಡಿ ಸಿಕ್ಕಿಕೊಂಡವರನ್ನು ರಕ್ಷಿಸಲು, ಮೃತರ ಸಂಬಂಧಿಕರಿಗೆ ಮಾನಸಿಕ ಬೆಂಬಲ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸರಕಾರದ ವಕ್ತಾರ ಗಿಯಾನಿಸ್ ಒಕೊನೊಮೊವು ಹೇಳಿದ್ದಾರೆ. ದುರಂತಕ್ಕೆ ಕಾರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದವರು ಹೇಳಿದ್ದಾರೆ.