ಪ್ಲಾಸ್ಟಿಕ್ ಸರ್ಜರಿ ನಡೆಸಿ ವೇಷ ಬದಲಿಸಿದ್ದರೂ ಕುಖ್ಯಾತ ಕ್ರಿಮಿನಲ್ ಸಿಕ್ಕಿಬಿದ್ದದ್ದು ಹೇಗೆ ಗೊತ್ತೇ?

ಬ್ಯಾಂಕಾಕ್, ಮಾ.1: ಥೈಲ್ಯಾಂಡ್ ನ ಕುಖ್ಯಾತ ಮಾದಕವಸ್ತು ವ್ಯಾಪಾರಿ ಹಲವು ಪ್ಲಾಸ್ಟಿಕ್ ಸರ್ಜರಿ ನಡೆಸಿಕೊಂಡು ಕೊರಿಯಾದ ವ್ಯಕ್ತಿಯಂತೆ ರೂಪ ಬದಲಾಯಿಸಿದರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದಾಗಿ ವರದಿಯಾಗಿದೆ.
ಕುಖ್ಯಾತ ಮಾದಕವಸ್ತು ಡೀಲರ್ ಸಹರಾತ್ ಸವಂಗ್ಜಯೆಂಗ್ ಎಂಬಾತನ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದು ಈತ ಪೊಲೀಸರ ಬಲೆಗೆ ಬಿದ್ದಿರಲಿಲ್ಲ. ಬಳಿಕ ತನ್ನ ಹೆಸರನ್ನು ಸಿಯಾಂಗ್ ಜಿಮಿನ್ ಎಂದು ಬದಲಿಸಿಕೊಂಡು ಪ್ಲಾಸ್ಟಿಕ್ ಸರ್ಜರಿಯ ಮೂಲಕ ರೂಪವನ್ನೂ ಬದಲಿಸಿಕೊಂಡಿದ್ದ.
ಕೊರಿಯನ್ ಪ್ರಜೆ ಎಂದು ಬಿಂಬಿಸಿಕೊಂಡು ಮಾದಕವಸ್ತು ವ್ಯವಹಾರ ಮುಂದುವರಿಸಿದ್ದ. ಇತ್ತೀಚೆಗೆ ಮಾದಕವಸ್ತು ವ್ಯಾಪಾರಿಯೊಬ್ಬನನ್ನು ಪೊಲೀಸರು ಬಂಧಿಸಿದಾಗ ಆತ ತನಗೆ ಕೊರಿಯಾದ ಪ್ರಜೆ ಜಿಮಿನ್ ಮಾದಕವಸ್ತು ಸರಬರಾಜು ಮಾಡಿರುವುದಾಗಿ ಮಾಹಿತಿ ನೀಡಿದ್ದ.
ಆತ ನೀಡಿದ ಮಾಹಿತಿಯಂತೆ ಅಪಾರ್ಟ್ಮೆಂಟ್ ಒಂದಕ್ಕೆ ದಾಳಿ ನಡೆಸಿದಾಗ ಅಲ್ಲಿ ಪ್ಲಾಸ್ಟಿಕ್ ಸರ್ಜರಿಯ ಮೂಲಕ ಮುಖದ ಚಹರೆ ಬದಲಿಸಿಕೊಂಡಿದ್ದ ಸಹರಾತ್ ಪತ್ತೆಯಾಗಿದ್ದು ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
Next Story