ಮೊಬೈಲ್ ಪ್ಯಾಕ್‍ನಲ್ಲಿ ಬರುವ ಚಾರ್ಜರ್ ಗೆ ಪ್ರತ್ಯೇಕ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು, ಮಾ. 2: ಮೊಬೈಲ್ ಪ್ಯಾಕ್‍ನಲ್ಲಿ ಬರುವ ಚಾರ್ಜರ್ ಗೂ ಸೇರಿ ಶೇ.5ರಷ್ಟು ಕೆವ್ಯಾಟ್ (ಕರ್ನಾಟಕ ಮೌಲ್ಯವರ್ಧಿತ ತೆರಿಗೆ) ವಿಧಿಸಿದ ಬಳಿಕ ಪ್ರತ್ಯೇಕವಾಗಿ ಹೆಚ್ಚುವರಿ ತೆರಿಗೆ ವಿಧಿಸಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
ರಾಜ್ಯ ಸರಕಾರದ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಹೈಕೋರ್ಟ್ ವಿಭಾಗೀಯಪೀಠ, ಈ ಆದೇಶ ನೀಡಿದೆ. ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯಿದೆ(ಕೆವ್ಯಾಟ್) ಅನ್ವಯ ಹೊರಡಿಸಿರುವ ಸೂಚನೆಯಲ್ಲಿ ಟೆಲಿಫೋನ್ ಸೆಟ್ ಎಂದು ಉಲ್ಲೇಖಿಸಲಾಗಿದೆ. ಸೆಟ್ ಎಂದರೆ ಅದರ ಭಾಗಗಳೂ ಚಾರ್ಜರ್ ಸಹಿತವಾಗಿರಲಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೆವ್ಯಾಟ್ ಕಾಯಿದೆ ಸೆಕ್ಷನ್ 4ರಡಿ ಮೌಲ್ಯಮಾಪನಕ್ಕೆ ಯಾವುದೇ ಕಾರ್ಯತಂತ್ರವಿಲ್ಲ. ಹೀಗಾಗಿ, ಪ್ರತಿಯೊಂದು ಬಿಡಿ ಭಾಗದ ಮೇಲೂ ಪ್ರತ್ಯೇಕ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಕಾಯಿದೆಯ ಶೆಡ್ಯೂಲ್ 3ರ ಪ್ರಕಾರ ಮೊಬೈಲ್ ಫೋನ್‍ಗೆ ಶೇ.5ರಷ್ಟು ತೆರಿಗೆ ಇದೆ. ಮತ್ತು ಅದರಲ್ಲಿ ಚಾರ್ಜರ್ ಸೇರಿದ್ದರೂ ಮತ್ತೆ ಚಾರ್ಜರ್ ಗೆ ಪ್ರತ್ಯೇಕವಾಗಿ ಶೇ.5ರಷ್ಟು ಶುಲ್ಕ ವಿಧಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣವೇನು?: ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಮುಖ ಮೊಬೈಲ್ ಕಂಪೆನಿಗೆ 2008ರಿಂದ 2013ರ ಅವಧಿಯಲ್ಲಿ ರಾಜ್ಯ ರಿಟೇಲ್ ಮಾರಾಟಗಾರರಿಗೆ ಮೊಬೈಲ್ ಮತ್ತು ಚಾರ್ಜರ್ ಮಾರಾಟ ಮಾಡಿರುವುದನ್ನು ಮೌಲ್ಯಮಾಪನ ನಡೆಸಿ ಚಾರ್ಜರ್‍ಗೆ ಶೇ.12ರಿಂದ ಶೇ.14.5ರಷ್ಟು ತೆರಿಗೆ ವಿಧಿಸಿದ್ದರು.
ಇದನ್ನು ಪ್ರಶ್ನಿಸಿ ಕಂಪೆನಿ 2017ರಲ್ಲಿ ಕರ್ನಾಟಕ ಮೇಲ್ಮನವಿ ಪ್ರಾಧಿಕಾರ(ಕೆಎಟಿ)ದ ಮೊರೆ ಹೋಗಿತ್ತು. ಕೆಎಟಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ತೆರಿಗೆ ಪಾವತಿಗೆ ನೀಡಿದ್ದ ನೋಟಿಸ್ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸರಕಾರ ಮೇಲ್ಮನವಿ ಸಲ್ಲಿಸಿತ್ತು.







