ಮಣಿಪಾಲ| ಕಳವು ಪ್ರಕರಣ: ಅಪ್ರಾಪ್ತರ ಸಹಿತ ನಾಲ್ವರು ಆರೋಪಿಗಳ ಬಂಧನ

ಮಣಿಪಾಲ: ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಬಾಲಕರ ಸಹಿತ ನಾಲ್ವರು ಆರೋಪಿಗಳನ್ನು ಪೆರಂಪಳ್ಳಿ ಶೀಂಬ್ರಾ ಕ್ರಾಸ್ ಬಳಿ ಮಾ.2ರಂದು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮೂಡು ಅಲೆವೂರು ಆದರ್ಶ್ ನಗರದ ವರುಣ ಕೊಡಂಚ(19) ಹಾಗೂ ಮೂಡು ಅಲೆವೂರು ನೆಹರೂ ನಗರದ ಕಾರ್ತಿಕ ಪೂಜಾರಿ(19) ಬಂಧಿತ ಆರೋಪಿಗಳು. ಬಂಧಿತರಿಂದ ಕಳವು ಮಾಡಿದ 2,40,000ರೂ. ಮೌಲ್ಯದ ಚಿನ್ನಾಭರಣ ಮತ್ತು ಒಂದು ಸ್ಕೂಟರ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಫೆ.18ರಂದು ರಾತ್ರಿ ನೆಹರು ನಗರದ ಮನೆಗೆ ನುಗ್ಗಿದ ಕಳ್ಳರು 2,40,000ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಆರೋಪಿಗಳು ಈ ಹಿಂದೆ ಕುಂದಾಪುರ ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ಎರಡು ಪ್ರಕರಣಗಳು ಹಾಗೂ ಮಣಿಪಾಲ ಠಾಣೆಯ ಒಂದು ಪ್ರಕರಣ ಸೇರಿ ಒಟ್ಟು ಮೂರು ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಮೂರು ಪ್ರಕರಣಗಳನ್ನು ಭೇದಿಸಿ ಆರೋಪಿತರಿಂದ ಸುಮಾರು 4ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಎಸ್ಪಿ ಅಕ್ಷಯ್ ಎಂ.ಎಚ್. ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ ಮತ್ತು ತಂಡದ ಸದಸ್ಯರಾದ ಡಿವೈಎಸ್ಪಿ ದಿನಕರ ಕೆ.ಪಿ, ಮಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ. ಎಸ್ಸೈಗಳಾದ ನವೀನ್ ನಾಯ್ಕ್, ರುಕ್ಮ ನಾಯ್ಕ್, ಮಪಾಲ ಠಾಣಾ ಎಎಸ್ಸೈಗಳಾದ ಗಂಗಪ್ಪಎಸ್., ನಾಗೇಶ್ ನಾಯಕ್, ಶೈಲೇಶ್ ಕುಮಾರ್, ಸಿಬ್ಬಂದಿ ಪ್ರಸನ್ನ ಸಿ., ಇಮ್ರಾನ್, ಸುಕುಮಾರ್ ಶೆಟ್ಟಿ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.