ವಿಶ್ವಕಪ್ ವಿಜೇತ ಅರ್ಜೆಂಟೀನ ಆಟಗಾರರು, ಸಹಾಯಕ ಸಿಬ್ಬಂದಿಗೆ 35 ಚಿನ್ನದ ಐಫೋನ್ ನೀಡಲು ಮುಂದಾದ ಮೆಸ್ಸಿ

ಬ್ಯುನಸ್‌ಐರಿಸ್, ಮಾ.2: ಖತರ್‌ನಲ್ಲಿ 2022ರಲ್ಲಿ ನಡೆದ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಐತಿಹಾಸಿಕ ಗೆಲುವಿನ ಭಾಗವಾಗಿದ್ದ ತನ್ನ ತಂಡದ ಪ್ರತಿಯೊಬ್ಬ ಸದಸ್ಯ ಹಾಗೂ ಸಹಾಯಕ ಸಿಬ್ಬಂದಿಗೆ 35 ಚಿನ್ನದ ಐಫೋನ್‌ಗಳನ್ನು ನೀಡಲು ಅರ್ಜೆಂಟೀನದ ಫಿಫಾ ವಿಶ್ವಕಪ್ ವಿಜೇತ ಸ್ಟಾರ್ ಲಿಯೊನೆಲ್ ಮೆಸ್ಸಿ(Lionel Messi) ಮುಂದಾಗಿದ್ದಾರೆ ಎಂದು ವರದಿಯಾಗಿದೆ.
‘ದಿ ಸನ್’ಪತ್ರಿಕೆಯ ವರದಿ ಪ್ರಕಾರ,175,000 ಪೌಂಡ್(ಅಂದಾಜು ರೂ.1.73 ಕೋ.ರೂ.)ವೌಲ್ಯದ 24 ಕ್ಯಾರಟ್ ಚಿನ್ನದಿಂದ ತಯಾರಿಸಿರುವ ಮೊಬೈಲ್‌ನಲ್ಲಿ ಆಟಗಾರರ ಹೆಸರುಗಳು, ಸಂಖ್ಯೆಗಳು ಹಾಗೂ ಅರ್ಜೆಂಟೀನದ ಲೋಗೊವನ್ನು ಕೆತ್ತಲಾಗಿದೆ. ಮೊಬೈಲ್‌ಗಳನ್ನು ಮೆಸ್ಸಿಯ ಅಪಾರ್ಟ್‌ಮೆಂಟ್‌ಗೆ ಶನಿವಾರ ತಲುಪಿಸಲಾಗಿದೆ.
ಲಿಯೊನೆಲ್ ಮೆಸ್ಸಿ ತನ್ನ ಹೆಮ್ಮೆಯ ಕ್ಷಣವನ್ನು ಆಚರಿಸಲು ವಿಶೇಷವಾದ ಹಾಗೂ ಅಮೋಘವಾದ ಏನನ್ನಾದರೂ ಮಾಡಲು ಬಯಸಿದ್ದರು. ಅವರು ವಾಣಿಜ್ಯೋದ್ಯಮಿ ಬೆನ್ ಲಿಯಾನ್ಸ್ ಅವರನ್ನು ಸಂಪರ್ಕಿಸಿದರು. ಅವರು ವಿನ್ಯಾಸದೊಂದಿಗೆ ಮೆಸ್ಸಿಯನ್ನು ಭೇಟಿಯಾದರು.
ಮೆಸ್ಸಿ ಗೆಲುವನ್ನು ಆಚರಿಸಲು ತನ್ನ ಎಲ್ಲ ಆಟಗಾರರು ಹಾಗೂ ಸಿಬ್ಬಂದಿಗೆ ವಾಚನ್ನು ಗಿಫ್ಟ್ ನೀಡುವ ಬದಲು ವಿಶೇಷ ಉಡುಗೊರೆ ನೀಡಲು ಬಯಸಿದ್ದರು. ಆಟಗಾರರ ಹೆಸರನ್ನು ಹೊಂದಿರುವ ಚಿನ್ನದ ಐಫೋನ್‌ಗಳನ್ನು ನೀಡುವಂತೆ ನಾನು ಸೂಚಿಸಿದೆ. ನನ್ನ ಐಡಿಯಾ ಅವರಿಗೆ ಇಷ್ಟವಾಯಿತು ಎಂದು ಐಡಿಸೈನ್ ಗೋಲ್ಡ್‌ನ ಸಿಇಒ ಬೆನ್ ಹೇಳಿದ್ದಾರೆಂದು ‘ದಿ ಸನ್’ ವರದಿ ಮಾಡಿದೆ.
ಅರ್ಜೆಂಟೀನ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು 4-2 ಅಂತರದಿಂದ ಮಣಿಸಿ ಮೂರನೇ ಬಾರಿ ವಿಶ್ವಕಪ್ ಪ್ರಶಸ್ತಿ ಜಯಿಸಿದೆ. ನಾಯಕ ಲಿಯೊನೆಲ್ ಮೆಸ್ಸಿ ಮೊತ್ತ ಮೊದಲ ಬಾರಿ ವಿಶ್ವಕಪ್ ಟ್ರೋಫಿಯನ್ನು ಜಯಿಸಿದ್ದರು.







