ಬಾಯ್ಮುಚ್ಚಿ, ನ್ಯಾಯಾಲಯದಿಂದ ಹೊರಹೋಗಿ: ವಕೀಲರಿಗೆ ಅಬ್ಬರಿಸಿದ ಸಿಜೆಐ ಚಂದ್ರಚೂಡ್

ಹೊಸದಿಲ್ಲಿ, ಮಾ. 2: ಅರ್ಜಿಯೊಂದನ್ನು ವಿಚಾರಣೆಗೆ ನಿಗದಿಪಡಿಸುವ ವಿಚಾರದಲ್ಲಿ ವಾಗ್ವಾದ ನಡೆದ ಬಳಿಕ, ತಾಳ್ಮೆ ಕಳೆದುಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್, ನ್ಯಾಯಾಲಯದಿಂದ ಹೊರಗೆ ಹೋಗುವಂತೆ ವಕೀಲರೊಬ್ಬರಿಗೆ ಆದೇಶ ನೀಡಿದರು.
ಸುಪ್ರೀಂ ಕೋರ್ಟ್ ವಕೀಲರ ಜಮೀನಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಮುಂಚಿತವಾಗಿ ನಡೆಸುವಂತೆ ವಕೀಲ ವಿಕಾಸ್ ಸಿಂಗ್ ನ್ಯಾಯಾಲಯವನ್ನು ಒತ್ತಾಯಿಸಿದಾಗ ನ್ಯಾ. ಚಂದ್ರಚೂಡ್ ‘‘ತನ್ನ ಗರಿಷ್ಠ ಧ್ವನಿಯಲ್ಲಿ ಅಬ್ಬರಿಸಿದರು’’ ಎಂದು ವರದಿಗಳು ಹೇಳಿವೆ.
ಆಕ್ರೋಶಭರಿತ ಮುಖ್ಯ ನ್ಯಾಯಾಧೀಶರು ವಕೀಲರ ಮಾತುಗಳನ್ನು ತಡೆದು, ‘‘ಬಾಯಿ ಮುಚ್ಚಿ. ಈಗಲೇ ನೀವು ನ್ಯಾಯಾಲಯದಿಂದ ಹೊರಗೆ ಹೋಗಿ. ನೀವು ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ’’ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಗೆ ಮಂಜೂರಾಗಿರುವ ಜಮೀನಿನಲ್ಲಿ ವಕೀಲರ ಚೇಂಬರ್ಗಳನ್ನು ನಿರ್ಮಿಸಲು ಅವಕಾಶ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ವಕೀಲರ ಸಂಘ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬೇಗನೇ ನಿಗದಿಪಡಿಸಬೇಕು ಎಂದು ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ವಾದಿಸುತ್ತಿದ್ದರು. ಈ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಲು ಕಳೆದ ಆರು ತಿಂಗಳಿನಿಂದಲೂ ವಕೀಲರು ಪರದಾಡುತ್ತಿದ್ದಾರೆ ಎಂದು ಅವರು ಹೇಳಿದರು.
‘‘ನೀವು ಈ ರೀತಿಯಾಗಿ ಜಮೀನು ಕೇಳಲು ಸಾಧ್ಯವಿಲ್ಲ. ಇಡೀ ದಿನ ನಾವು ಸೋಮಾರಿಯಾಗಿ ಕುಳಿತ ಯಾವುದಾದರೂ ದಿನ ಇದ್ದರೆ ಹೇಳಿ’’ ಎಂದು ನ್ಯಾ. ಚಂದ್ರಚೂಡ್ ಹೇಳಿದರು.
‘‘ಇಡೀ ದಿನ ನೀವು ಸೋಮಾರಿಯಾಗಿ ಕುಳಿತುಕೊಳ್ಳುತ್ತೀರಿ ಎಂದು ನಾನು ಹೇಳುತ್ತಿಲ್ಲ. ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸುವುದಕ್ಕಾಗಿ ಮಾತ್ರ ನಾನು ಪ್ರಯತ್ನಿಸುತ್ತಿದ್ದೇನೆ. ಅದು ಆಗದಿದ್ದರೆ ನಾನು ಈ ವಿಷಯವನ್ನು ಮುಂದಕ್ಕೆ ಒಯ್ದು ನಿಮ್ಮ ಮನೆ ಬಾಗಿಲಿಗೂ ಬರುತ್ತೇನೆ. ವಕೀಲರ ಸಂಘವನ್ನು ಈ ರೀತಿಯಾಗಿ ನಡೆಸಿಕೊಳ್ಳುವುದನ್ನು ನಾನು ಬಯಸುವುದಿಲ್ಲ’’ ಎಂದು ವಕೀಲ ಸಿಂಗ್ ಹೇಳಿದರು.
‘‘ಮುಖ್ಯ ನ್ಯಾಯಾಧೀಶರಿಗೆ ಬೆದರಿಕೆ ಹಾಕಬೇಡಿ. ಇದು ನೀವು ವರ್ತಿಸಬೇಕಾದ ರೀತಿಯೇ?’’ ಎಂದು ಮುಖ್ಯ ನಾಯಾಧೀಶರು ಪ್ರಶ್ನಿಸಿದರು.
‘‘ನಾನು ಮುಖ್ಯ ನ್ಯಾಯಾಧೀಶ. ನಾನು 2000 ಮಾರ್ಚ್ 29ರಿಂದ ಇಲ್ಲಿದ್ದೇನೆ. ನಾನು 22 ವರ್ಷಗಳಿಂದ ಈ ವೃತ್ತಿಯಲ್ಲಿದ್ದೇನೆ. ವಕೀಲರ ಸಂಘದ ಸದಸ್ಯರಾಗಲಿ, ದೂರುದಾರರಾಗಲಿ ಅಥವಾ ಯಾರೇ ಆಗಲಿ ನನ್ನ ಮೇಲೆ ಸವಾರಿ ಮಾಡಲು ನಾನು ಯಾರಿಗೂ ಯಾವತ್ತೂ ಅವಕಾಶ ನೀಡಿಲ್ಲ. ನನ್ನ ಕೊನೆಯ ಎರಡು ವರ್ಷಗಳ ವೃತ್ತಿ ಜೀವನದಲ್ಲಿ ಹಾಗೆ ಮಾಡಲು ಅವಕಾಶ ನೀಡುವುದಿಲ್ಲ’’ ಎಂದರು.
‘‘ನಿಮ್ಮನ್ನು ಸಾಮಾನ್ಯ ದೂರುದಾರ ಎಂಬುದಾಗಿ ಪರಿಗಣಿಸಲಾಗುತ್ತದೆ. ನೀವು ಬಯಸದ್ದನ್ನು ಏನಾದರೂ ಮಾಡುವಂತೆ ದಯವಿಟ್ಟು ನನ್ನನ್ನು ಬಲವಂತಪಡಿಸಬೇಡಿ’’ ಎಂದು ಅವರು ಮುಂದುವರಿಯುತ್ತಾ ಹೇಳಿದರು.
ವಾಗ್ವಾದದ ವೇಳೆ, ನಿಮ್ಮ ಧ್ವನಿ ಏರಿಸಬೇಡಿ ಎಂಬುದಾಗಿಯೂ ನ್ಯಾ. ಚಂದ್ರಚೂಡ್ ವಕೀಲರಿಗೆ ಹೇಳಿದರು.
ವಕೀಲರು 20 ವರ್ಷಗಳಿಂದ ಚೇಂಬರ್ಗಳಿಗಾಗಿ ಕಾಯುತ್ತಿದ್ದಾರೆ, ಹಾಗಾಗಿ, ಈ ವಿಷಯದ ಬಗ್ಗೆ ನಾನು ತೀವ್ರ ಭಾವನೆಗಳನ್ನು ಹೊಂದಿದ್ದೇನೆ ಎಂದು ವಕೀಲ ಸಿಂಗ್ ಹೇಳಿದರು. ‘‘ವಕೀಲರ ಸಂಘವು ಏನೂ ಮಾಡುತ್ತಿಲ್ಲ ಎಂದ ಮಾತ್ರಕ್ಕೆ, ಅದನ್ನು ನಿರ್ಲಕ್ಷಿಸಬೇಕು ಎಂದೇನಿಲ್ಲ’’ ಎಂದರು.
‘‘ದಯವಿಟ್ಟು ನಿಮ್ಮ ಧ್ವನಿಯನ್ನು ಏರಿಸಬೇಡಿ. ಇದು ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ನೀವು ವರ್ತಿಸುವ ರೀತಿಯಲ್ಲ. ಸುಪ್ರೀಂ ಕೋರ್ಟ್ಗೆ ಮಂಜೂರಾಗಿರುವ ಜಮೀನನ್ನು ವಕೀಲರ ಸಂಘಕ್ಕೆ ನೀಡಬೇಕೆಂದು ನೀವು ಕೇಳುತ್ತಿರುವುದು. ನಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಆ ಪ್ರಕರಣವನ್ನು ವಿಚಾರಣೆಗಾಗಿ ಮಾರ್ಚ್ 17ರಂದು ಎತ್ತಿಕೊಳ್ಳಲಾಗುವುದು ಹಾಗೂ ಅಂದು ಅದು ವಿಚಾರಣೆಗೆ ಬರುವ ಮೊದಲ ಪ್ರಕರಣವೇನೂ ಅಲ್ಲ’’ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.
ಬಳಿಕ, ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎನ್.ಕೆ. ಕೌಲ್ ವಕೀಲರ ಸಂಘದ ಪರವಾಗಿ ಮುಖ್ಯ ನ್ಯಾಯಾಧೀಶರ ಕ್ಷಮೆ ಕೋರಿದರು ಎಂದು ವರದಿಗಳು ಹೇಳಿವೆ.







