ಮಂಗಳೂರಿನ ಚಿನ್ನಾಭರಣ ಅಂಗಡಿ ಸಿಬ್ಬಂದಿಯ ಕೊಲೆ ಪ್ರಕರಣ: ಆರೋಪಿ ಕಾಸರಗೋಡಿನಲ್ಲಿ ಪೊಲೀಸ್ ಬಲೆಗೆ

ಕಾಸರಗೋಡು/ಮಂಗಳೂರು: ತಿಂಗಳ ಹಿಂದೆ ಮಂಗಳೂರಿನ ಚಿನ್ನಾಭರಣ ಅಂಗಡಿಯೊಂದರಲ್ಲಿ ನಡೆದ ಸಿಬ್ಬಂದಿಯ ಕೊಲೆ ಪ್ರಕರಣದ ಆರೋಪಿಯನ್ನು ಗುರುವಾರ ಕಾಸರಗೋಡಿನಲ್ಲಿ ಬಂಧಿಸಿರುವುದಾಗಿ ಕಾಸರಗೋಡು ಡಿವೈಎಸ್ಪಿ ಪಿ.ಕೆ.ಸುಧಾಕರನ್ ತಿಳಿಸಿದ್ದಾರೆ.
ಕೋಝಿಕ್ಕೋಡ್ ಕೊಯಿಲಾಂಡಿ ನಿವಾಸಿ ಶಿಫಾಝ್(33) ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಕಾಸರಗೋಡಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಿಂದ ಗುರುವಾರ ಅಪರಾಹ್ನ ಬಂಧಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ‘ಮಂಗಳೂರು ಜ್ಯುವೆಲ್ಲರ್ಸ್’ ಎಂಬ ಚಿನ್ನಾಭರಣ ಅಂಗಡಿಯ ಸಿಬ್ಬಂದಿ, ಸ್ಥಳೀಯ ಅತ್ತಾವರ ನಿವಾಸಿಯಾಗಿದ್ದ ರಾಘವೇಂದ್ರ ಆಚಾರ್ಯ(50) ಎಂಬವರನ್ನು ಫೆಬ್ರವರಿ 3ರಂದು ಅಂಗಡಿಯಲ್ಲೇ ಚೂರಿಯಿಂದು ಕೊಲೆ ಮಾಡಲಾಗಿತ್ತು. ಅಂದು ಮಧ್ಯಾಹ್ನ ಅಂಗಡಿಯ ಮಾಲಕ ಊಟಕ್ಕೆ ತೆರಳಿ ಹಿಂದಿರುಗಿದ ವೇಳೆ ಮಾಸ್ಕ್ ಧರಿಸಿದ್ದ ದುಷ್ಕರ್ಮಿಯೋರ್ವ ಅವರನ್ನು ಚೂರಿಯಿಂದು ಕೊಲೆ ಮಾಡಿ ಪರಾರಿಯಾಗಿರುವುದಾಗಿ ಜ್ಯುವೆಲ್ಲರಿಯ ಮಾಲಕ ಕೇಶವ ಆಚಾರ್ಯ ಬಂದರು ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.
ಈ ವೇಳೆ ಜ್ಯುವೆಲ್ಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಚಿನ್ನಾಭರಣದಲ್ಲಿ ಕೆಲವು ಕಳವಾಗಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದರು.
ವಿವಿಧ ಆಯಾಮದಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಶಂಕಿತ ಆರೋಪಿಯ ಸಿಸಿಟಿವಿ ಕ್ಯಾಮರಾ ಚಿತ್ರ ಬಿಡುಗಡೆಗೊಳಿಸಿದ್ದರು. ಇದೀಗ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆದರೆ ಆರೋಪಿಯ ಬಂಧನವನ್ನು ಮಂಗಳೂರು ಪೊಲೀಸರು ದೃಢೀಕರಿಸಿಲ್ಲ.