ಅದಾನಿ ಗುಂಪಿನ ವಿರುದ್ಧದ ಆರೋಪಗಳ ತನಿಖೆಗೆ 6 ಸದಸ್ಯರ ಸಮಿತಿ ರಚಿಸಿದ ಸುಪ್ರೀಂ
ನಿಮ್ಮ ತನಿಖೆಯನ್ನು 2 ತಿಂಗಳಲ್ಲಿ ಮುಗಿಸಿ: ಸೆಬಿಗೆ ಸೂಚನೆ

ಹೊಸದಿಲ್ಲಿ, ಮಾ. 2: ಅದಾನಿ ಗುಂಪಿನ ಕಂಪೆನಿಗಳ ವಿರುದ್ಧ ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಮಾಡಿರುವ ಅವ್ಯವಹಾರ ಆರೋಪಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ. ಎ.ಎಮ್. ಸಪ್ರೆ ನೇತೃತ್ವದಲ್ಲಿ 6 ಸದಸ್ಯರ ಪರಿಣತ ಸಮಿತಿಯೊಂದನ್ನು ರಚಿಸಿದೆ.
ಅದೇ ವೇಳೆ, ಇದೇ ವಿಷಯದಲ್ಲಿ ಈಗಾಗಲೇ ಆರಂಭಿಸಿರುವ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಭಾರತೀಯ ಶೇರು ವಿನಿಮಯ ಮಂಡಳಿ (ಸೆಬಿ)ಗೆ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಸದಸ್ಯರಾಗಿರುವ ಮೂವರು ಸದಸ್ಯರ ನ್ಯಾಯಪೀಠವೊಂದು ಸೂಚಿಸಿದೆ.
ಸೆಕ್ಯುರಿಟೀಸ್ ಕಾಂಟ್ರಾಕ್ಟ್ ರೆಗ್ಯುಲೇಶನ್ ನಿಯಮಗಳ 19(ಎ) ನಿಯಮದ ಉಲ್ಲಂಘನೆಯಾಗಿದೆಯೇ, ಸಂಬಂಧಿತ ಸಂಸ್ಥೆಗಳೊಂದಿಗೆ ನಡೆದ ವ್ಯವಹಾರಗಳು ಮತ್ತು ಸಂಬಂಧಿತ ಸಂಸ್ಥೆಗಳಿಗೆ ಸಂಬಂಧಿಸಿದ ಇತರ ಸಾಂದರ್ಭಿಕ ಮಾಹಿತಿಗಳನ್ನು ಕಾನೂನು ಪ್ರಕಾರ ಸೆಬಿಗೆ ತಿಳಿಸುವಲ್ಲಿ ವೈಫಲ್ಯ ಸಂಭವಿಸಿದೆಯೇ ಮತ್ತು ಚಾಲ್ತಿಯಲ್ಲಿರುವ ಕಾನೂನುಗಳಿಗೆ ವಿರುದ್ಧವಾಗಿ ಶೇರು ಬೆಲೆಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ನಡೆದಿದೆಯೇ ಎಂಬ ವಿಷಯಗಳ ಬಗ್ಗೆ ತನಿಖೆ ನಡೆಸುವಂತೆ ಶೇರು ಮಾರುಕಟ್ಟೆಗಳ ನಿಯಂತ್ರಣ ಸಂಸ್ಥೆ ಸೆಬಿಗೆ ನ್ಯಾಯಪೀಠವು ಸೂಚಿಸಿದೆ.
ಸುಪ್ರೀಂ ಕೋರ್ಟ್ ರಚಿಸಿರುವ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾ. ಎ.ಎಮ್. ಸಪ್ರೆ ನೇತೃತ್ವದ 6 ಸದಸ್ಯರ ಪರಿಣತ ಸಮಿತಿಯಲ್ಲಿ ಭಾರತೀಯ ಸ್ಟೇಟ್ಬ್ಯಾಂಕ್ನ ಮಾಜಿ ಅಧ್ಯಕ್ಷ ಒ.ಪಿ. ಭಟ್, ಬಾಂಬೆ ಹೈಕೋರ್ಟ್ನ ಮಾಜಿ ನ್ಯಾಯಾಧೀಶ ಜೆ.ಪಿ. ದೇವಧರ್, ಇನ್ಫೋಸಿಸ್ನ ಮಾಜಿ ಅಧ್ಯಕ್ಷ ಕೆ.ವಿ. ಕಾಮತ್, ಯುಐಡಿಎಐ ಮಾಜಿ ಅಧ್ಯಕ್ಷ ಹಾಗೂ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಮತು ವಕೀಲ ಸೋಮಶೇಖರ್ ಸುಂದರೇಶನ್ ಇದ್ದಾರೆ.
ಸ್ವತಂತ್ರ ತನಿಖಾ ಸಮಿತಿಯ ಸ್ಥಾಪನೆಯು, ನಿಯಂತ್ರಣ ಸಂಸ್ಥೆಗಳ ಮೇಲಿನ ನಕಾರಾತ್ಮಕ ವ್ಯಾಖ್ಯಾನವೆಂಬುದಾಗಿ ಭಾವಿಸಬಾರದು ಎಂಬುದಾಗಿಯೂ ನ್ಯಾಯಾಲಯ ಹೇಳಿತು.
ಇತ್ತೀಚಿನ ದಿನಗಳಲ್ಲಿ ಶೇರು ಮಾರುಕಟ್ಟೆಯಲ್ಲಿ ಕಂಡುಬಂದ ಅಸ್ಥಿರತೆಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವುದು ಸೇರಿದಂತೆ ಪರಿಸ್ಥಿತಿಯ ಒಟ್ಟಾರೆ ಅಂದಾಜನ್ನು ಪರಿಣತ ಸಮಿತಿಯು ಮಾಡುವುದು ಹಾಗೂ ಹೂಡಿಕೆದಾರರ ಜಾಗೃತಿಯನ್ನು ಹೆಚ್ಚಿಸಲು ಕ್ರಮಗಳನ್ನು ಶಿಫಾರಸು ಮಾಡುವುದು ಎಂದು ನ್ಯಾಯಾಲಯ ಹೇಳಿದೆ.
ಅದಾನಿ ಗುಂಪಿನ ಕಂಪೆನಿಗಳು ಅಥವಾ ಇತರ ಕಂಪೆನಿಗಳು ಶೇರು ಮಾರುಕಟ್ಟೆಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದ್ದರೆ ಅದರೊಂದಿಗೆ ವ್ಯವಹರಿಸುವಲ್ಲಿ ಮಾರುಕಟ್ಟೆ ನಿಯಂತ್ರಣ ಸಂಸ್ಥೆಗಳು ವಿಫಲವಾಗಿವೆಯೇ ಎನ್ನುವ ಬಗ್ಗೆಯೂ ಸಮಿತಿ ತನಿಖೆ ನಡೆಸಲಿದೆ. ಹಾಗೂ ಹೂಡಿಕೆದಾರರ ರಕ್ಷಣೆಗಾಗಿ ಶಾಸನಾತ್ಮಕ ಚೌಕಟ್ಟು ಮತ್ತು ನಿಯಂತ್ರಣ ಚೌಕಟ್ಟನ್ನು ಬಲಪಡಿಸಲು ಹಾಗೂ ಹಾಲಿ ಚೌಕಟ್ಟುಗಳ ಮಿತಿಯಲ್ಲೇ ವ್ಯವಹಾರಗಳು ನಡೆಯುವಂತೆ ನೋಡಿಕೊಳ್ಳಲು ಅದು ಕ್ರಮಗಳನ್ನೂ ಶಿಫಾರಸು ಮಾಡಲಿವೆ.
ಅಂತಿಮ ಜಯ ಸತ್ಯಕ್ಕೆ: ಗೌತಮ್ ಅದಾನಿ
ಸುಪ್ರೀಂ ಕೋರ್ಟ್ನ ಆದೇಶದ ಬೆನ್ನಿಗೇ, ಆದೇಶವನ್ನು ಸ್ವಾಗತಿಸಿ ಅದಾನಿ ಗುಂಪಿನ ಅಧ್ಯಕ್ಷ ಗೌತಮ್ ಅದಾನಿ ಟ್ವೀಟ್ ಮಾಡಿದ್ದಾರೆ. ‘‘ಗೌರವಾನ್ವಿತ ಸುಪ್ರೀಂ ಕೋರ್ಟ್ನ ಆದೇಶವನ್ನು ಅದಾನಿ ಗುಂಪು ಸ್ವಾಗತಿಸುತ್ತದೆ. ಇದು ನಿರ್ದಿಷ್ಟ ಸಮಯ ಮಿತಿಯಲ್ಲಿ ವಿವಾದಕ್ಕೆ ಅಂತ್ಯವೊಂದನ್ನು ತರುತ್ತದೆ. ಅಂತಿಮ ಜಯ ಸತ್ಯಕ್ಕೆ’’ ಎಂಬುದಾಗಿ ಅವರು ಟ್ವಿಟರ್ ನಲ್ಲಿ ಬರೆದಿದ್ದಾರೆ.







