ಸಿದ್ದಾಪುರ ಜನ್ಸಾಲೆ ಬದ್ರಿಯಾ ಜುಮ್ಮಾ ಮಸೀದಿ ಉದ್ಘಾಟನೆ: ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಸೌಹಾರ್ದ ಸಂಗಮ
ಕಮಲಶಿಲೆ ದೇವಸ್ಥಾನಕ್ಕೆ ಬಾಷಾ ಸಾಹೇಬರಿಂದ ದೇಣಿಗೆ: ಸಚ್ಚಿದಾನಂದ ಚಾತ್ರ
ಕುಂದಾಪುರ: ಸೂರ್ಯಚಂದ್ರ ಇರುವ ತನಕ ನಾವೆಲ್ಲ ಯಾವುದೇ ವೈಮನಸ್ಸು ಇಲ್ಲದೆ, ಜಾತಿ ಧರ್ಮದ ಎಲ್ಲೇ ಮೀರಿ ಬದುಕಬೇಕು. ಕಮಲಶಿಲೆ ದೇವಸ್ಥಾನಕ್ಕೆ ಬಾಷಾ ಸಾಹೇಬರು ದೇಣಿಗೆ ನೀಡಿದ್ದಾರೆ. ಮುಸ್ಲಿಮರು ಯಕ್ಷಗಾನ ಮಾಡಿಸಿದ್ದಾರೆ. ಇದೆಲ್ಲಾ ಸಹಬಾಳ್ವೆಯ ಪ್ರತೀಕ ಎಂದು ಶ್ರೀಕ್ಷೇತ್ರ ಕಮಲಶಿಲೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಹೇಳಿದ್ದಾರೆ.
ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಜನ್ಸಾಲೆಯಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಉದ್ಘಾಟನೆ ಪ್ರಯುಕ್ತ ಗುರುವಾರ ಆಯೋಜಿಸಲಾದ ಸೌಹಾರ್ದ ಸಂಗಮದಲ್ಲಿ ಅವರು ಮಾತನಾಡುತಿದ್ದರು.
ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯ ಕ್ಷೇತ್ರದ ಫಾ.ಸುನಿಲ್ ವೇಗಸ್ ಮಾತನಾಡಿ, ನಮ್ಮಲ್ಲಿ ಸೌಹಾರ್ಧತೆಗೆ ಕೊರತೆಯಿಲ್ಲ. ಆದರೆ ಸಂಕುಚಿತ ಮನೋ ಭಾವನೆ ಹಾಗೂ ಸ್ವಾರ್ಥದಿಂದಾಗಿ ಸೌಹಾರ್ದತೆ ಕಡಿಮೆಯಾಗುತ್ತಿದೆ. ಎಲ್ಲರ ಬದುಕಿನ ಕ್ಷೇಮ, ಅಭಿವೃದ್ಧಿ ಸೌಹಾರ್ದತೆಯ ಉದ್ದೇಶವಾಗಿದೆ. ವಿಶಾಲ ಮನೋಭಾವನೆಯಿಂದ ಬದುಕುವ ಗುಣ ರೂಡಿಸಿಕೊಳ್ಳಬೇಕು. ಚುನಾವಣೆ ಸಮಯದಲ್ಲಿ ಜಾತಿ, ಧರ್ಮ ಬಂದು ದ್ವೇಷ ಬಿತ್ತುವ ಕಾರ್ಯ ನಡೆಯುತ್ತದೆ. ಯಾರದ್ದೋ ಸ್ವಾರ್ಥಕ್ಕಾಗಿ ಪ್ರಚೋದನೆಗೆ ಬಲಿಯಾಗಬಾರದು ಎಂದರು.
ಮೂಡಬಿದ್ರೆ ದ್ಸಿಕ್ರಾ ಎಜುಕೇಶನಲ್ ಸೆಂಟರ್ ಚೆಯರ್ಮನ್ ನೌಫಲ್ ಸಖಾಫಿ ಕಳಸ ಮಾತನಾಡಿ, ಪ್ರತಿಯೊಂದು ಧರ್ಮದ ಮೂಲ ದಯೆ ಆಗಿದೆ. ಮೊದಲು ಮಾನವೀಯತೆ ಬೆಳೆಸಿಕೊಂಡು ಮನುಷ್ಯನಾಗುವುದನ್ನು ಕಲಿಯಬೇಕು. ಪರಸ್ಪರ ಪ್ರೀತಿಸುವ ಹಾಗೂ ಬೇರೆ ಧರ್ಮವನ್ನು ಗೌರವಿಸುವ ನಿಷ್ಕಪಟ ವ್ಯಕ್ತಿತ್ವ ರೂಡಿಸಿಕೊಳ್ಳಬೇಕು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣ ಘಟನೆಗಳನ್ನೂ ವೈಭವೀಕರಿಸಿ ಕೋಮು ಭಾವನೆಗಳನ್ನು ಕೆರಳಿಸುವ ಷಡ್ಯಂತ್ರ ರೂಪಿಸುತ್ತಿದ್ದು ಇದು ನಿಜವಾದ ಧರ್ಮನಿಷ್ಟರು ಮಾಡುವುದಿಲ್ಲ ಎಂದರು.
. ಜನ್ಸಾಲೆ ಬದ್ರಿಯಾ ಜಾಮೀಯಾ ಮಸೀದಿ ಅಧ್ಯಕ್ಷ ಅಬ್ದುಲ್ ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಸಿದ್ದಾಪುರ ಗ್ರಾಪಂ ಅಧ್ಯಕ್ಷ ಶೇಖರ್ ಕುಲಾಲ್ ಜನ್ಸಾಲೆ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ಜೌಹರಿ, ಉದ್ಯಮಿಗಳಾದ ಅಲ್ತಾಫ್ ಹೆನ್ನಾಬೈಲು, ಎಸ್.ಎಂ.ಇರ್ಷಾದ್, ತೌಫಿಕ್ ಹಾಜಿ ನಾವುಂದ, ಮಾಧವ ಕಾಮತ್ ಸಿದ್ದಾಪುರ, ಮಲೆನಾಡು ಅಭಿವೃದ್ಧಿ ಮಂಡಲದ ಸದಸ್ಯ ಜಯರಾಮ ಭಂಡಾರಿ ಜನ್ಸಾಲೆ, ಉಳ್ಳೂರು ಬನಶಂಕರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಶೆಟ್ಟಿ ಸಂಪಿಗೇಡಿ, ಪ್ರಮುಖರಾದ ಕೆ.ಎ.ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ, ಜನ್ಸಾಲೆ ಬಿಜೆಎಂ ಸ್ಥಾಪಕ ಖತೀಬ ಅಬ್ದುಲ್ ಖಾದರ್, ಸಮಾಜ ಸೇವಕ ಎಸ್.ದಸ್ತಗಿರಿ ಕಂಡ್ಲೂರು, ಹೆನ್ನಾಬೈಲ್ ಮಸೀದಿ ಖತೀಬ್ ಶಾ ಆಲಮ್ ರಝ್ವಿ, ಎಸ್.ಜೆ.ಎಂ ಉಡುಪಿ ಜಿಲ್ಲಾ ಅಧ್ಯಕ್ಷ ಅಬ್ದುರ‌್ರಝಾಕ್ ಖಾಸಿಮಿ, ಕರ್ನಾಟಕ ಮುಸ್ಲೀಂ ಜಮಾಅತ್ ಉಡುಪಿ ಜಿಲ್ಲಾ ಅಧ್ಯಕ್ಷ ಬಿಎಸ್‌ಎಫ್ ರಫಿಕ್ ಗಂಗೊಳ್ಳಿ, ಎಸ್‌ವೈಎಸ್ ಉಡುಪಿ ಜಿಲ್ಲಾಧ್ಯಕ್ಷ ಅಡ್ವಕೇಟ್ ಹಂಝತ್ ಹೆಜಮಾಡಿ, ಎಸ್.ಎಂ.ಎ ಉಡುಪಿ ಜಿಲ್ಲಾದ್ಯಕ್ಷ ಮುಹಮ್ಮದ್ ಮನ್ಸೂರ್ ಕೋಡಿ, ನಮ್ಮ ನಾಡು ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಮುಷ್ತಾಕ್ ಆಹ್ಮದ್ ಬೆಳ್ವೆ, ಲೇಖಕ ಮುಸ್ತಾಕ್ ಹೆನ್ನಾಬೈಲು, ಜನ್ಸಾಲೆ ಬಿಜೆಎಂ ಸದರ್ ಮುಅಲ್ಲಿಂ ಶಕೀರ್ ಮಿಸ್ಬಾಹಿ, ಸ್ವಲಾತ್ ಕಮಿಟಿಯ ರಜಬ್, ರಿಫಾಯಿಯ್ಶಾ ದಫ್ ಸಮಿತಿ ಅಧ್ಯಕ್ಷ ಅಶ್ರಫ್ ಕೆ.ಪಿ.ಎಚ್ ಉಪಸ್ಥಿತರಿದ್ದರು.
ಜನ್ಸಾಲೆ ಬಿಜೆಎಂ ಕಟ್ಟಡ ಕಮಿಟಿ ಅಧ್ಯಕ್ಷ ಎಂ.ಎಸ್.ಮುಹಮ್ಮದ್ ಸ್ವಾಗತಿಸಿದರು. ರಿಯಾಝ್ ಕಿರಾತ್ ಪಠಿಸಿದರು. ನೌಫಲ್ ನಿರೂಪಿಸಿ, ಇಬ್ರಾಹಿಂ ಜೆ. ವಂದಿಸಿದರು.
ನವೀಕೃತ ಮಸೀದಿ ಉದ್ಘಾಟನೆ
ನವೀಕೃತ ಮಸೀದಿಯನ್ನು ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಳ್ ಕುಂಬೋಳ್ ಅವರು ಉದ್ಘಾಟಿಸಿದರು. ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುವಾ ನೆರವೇರಿಸಿದರು.
ಅಸ್ಸಯ್ಯಿದ್ ಜಾಫರ್ ಅಸ್ಸಖಾಪ್ ತಂಳ್ ಕೋಟೇಶ್ವರ ಹಾಗೂ ಪ್ರಮುಖ ಗಣ್ಯರ ಹಾಜರಿದ್ದರು. ಆಸುಪಾಸಿನ ಸರ್ವಧರ್ಮದವರು ಆಗಮಿಸಿ ಮಸೀದಿ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.