ತ್ರಿಪುರಾ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ

ಕೊಹಿಮಾ/ಶಿಲ್ಲಾಂಗ್/ಅಗರ್ತಲಾ, ಮಾ.2: ಈಶಾನ್ಯ ಭಾರತದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತಏಣಿಕೆ ಗುರುವಾರ ನಡೆದಿದ್ದು, ತ್ರಿಪುರಾದಲ್ಲಿ ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ಮರಳಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನಾಗಾಲ್ಯಾಂಡ್ನಲ್ಲಿ ಎನ್ಡಿಪಿಪಿ-ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಮರಳಿದೆ.
ಮೇಘಾಲಯದಲ್ಲಿ ಆಡಳಿತಾರೂಢ ನ್ಯಾಶನಲ್ ಪೀಪಲ್ಸ್ ಪಾರ್ಟಿ ಮುನ್ನಡೆಯನ್ನು ಸಾಧಿಸಿದೆ. 60 ಸದಸ್ಯ ಬಲದ ತ್ರಿಪುರದಲ್ಲಿ ಬಿಜೆಪಿ-ಐಪಿಎಫ್ಟಿ ಮೈತ್ರಿಕೂಟವು 33 ಸ್ಥಾನಗಳಲ್ಲಿ ಗೆಲುವಿನ ಪತಾಕೆ ಹಾರಿಸಿದೆ. ತ್ರಿಪುರಾದ ರಾಜವಂಶಸ್ಥ ಪ್ರದ್ಯೋತ್ ಕಿಶೋರ್ ದೇಬಬರ್ಮಾ ಅವರ ಹೊಸತಾಗಿ ಸ್ಥಾಪಿಸಿದ ತ್ರಿಪ್ರಾ ಮೊತಾ ಪಕ್ಷವು 13 ಸ್ಥಾನಗಳಲ್ಲಿ ಜಯಗಳಿಸಿದೆ. ಎಡರಂಗ-ಕಾಂಗ್ರೆಸ್ ಮೈತ್ರಿಕೂಟವು 14 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ.
ಎಡರಂಗದ ಪಾರಂಪರಿಕ ಬುಡಕಟ್ಟು ಸಮುದಾಯದ ಮತಗಳನ್ನು ದೇಬಬರ್ಮಾ ಅವರ ಪಕ್ಷವು ಕಬಳಿಸಿರುವುದು ಎಡರಂಗ-ಕಾಂಗ್ರೆಸ್ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ನೀಡಿದೆ.
ತ್ರಿಪುರದಲ್ಲಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ತೃಣಮೂಲ ಕಾಂಗ್ರೆಸ್ ಒಂದೂ ಸ್ಥಾನವನ್ನು ಗಳಿಸಲು ವಿಫಲವಾಗಿದೆ. ಚಲಾವಣೆಯಾದ ಒಟ್ಟು ಮತಗಳ ಪೈಕಿ ಆ ಪಕ್ಷದ ಅಭ್ಯರ್ಥಿಗಳು ಕೇವಲ 0.88ರಷ್ಟು ಸ್ಥಾನಗಳನ್ನು ಮಾತ್ರವೇ ಪಡೆಯಲು ಸಫಲರಾಗಿದ್ದಾರೆ.
ಬಿಜೆಪಿ ಹಾಗೂ ತ್ರಿಪುರಾ ಮೂಲನಿವಾಸಿಗಳ ಫ್ರಂಟ್ (ಐಪಿಎಫ್ಟಿ) ಮೈತ್ರಿಕೂಟ ಸತತ ಎರಡನೇ ಬಾರಿ ಅಧಿಕಾರಕ್ಕೇರುವಲ್ಲಿ ಸಫಲವಾಗಿದೆಯಾದರೂ, 2018ರ ಚುನಾವಣೆಗೆ ಹೋಲಿಸಿದರೆ ಎರಡೂ ಪಕ್ಷಗಳು ಒಟ್ಟಾಗಿ 11 ಸ್ಥಾನಗಳನ್ನು ಕಳೆದುಕೊಂಡಿವೆ.
ಈ ಸಲದ ಚುನಾವಣೆಯಲ್ಲಿ 55 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಜೆಪಿ 32 ಸ್ಥಾನಗಳನ್ನು ಗೆದ್ದಿದ್ದರೆ, ಐಪಿಎಫ್ಟಿ ಪಕ್ಷವು 1 ಸ್ಥಾನದಲ್ಲಿ ಮಾತ್ರವೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ನಾಗಾಲ್ಯಾಂಡ್ ನಲ್ಲಿಯೂ ಅರಳಿದ ಕಮಲ
60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಎನ್ಡಿಪಿಪಿ-ಬಿಜೆಪಿ ಮೈತ್ರಿಕೂಟವು 33 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ರಾಷ್ಟ್ರೀಯ ಪ್ರಜಾತಾಂತ್ರಿಕ ಪ್ರಗತಿಪರ ಪಕ್ಷ (ಎನ್ಡಿಪಿಪಿ) 21 ಸ್ಥಾನಗಳನ್ನು ಗೆದ್ದರೆ, ಮಿತ್ರಪಕ್ಷವಾದ ಬಿಜೆಪಿ 12 ಸ್ಥಾನಗಳನ್ನು ಪಡೆದಿದೆ.
ನಾಗಾಲ್ಯಾಂಡ್ ವಿಧಾನಸಭೆಯ 59 ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆದಿದ್ದು, ಅಕುಲುಟೊ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಝೆಟೊ ಕಿನಿಮಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಎನ್ಡಿಪಿಪಿ ಪಕ್ಷದ ವರಿಷ್ಠ ಹಾಗೂ ಮುಖ್ಯಮಂತ್ರಿ ನೈಪು ರಿಯೋ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ನ ಸೆಯಿವಿಲಿ ಸಾಚು ಅವರ್ನು ಪರಾಭವಗೊಳಿಸಿದ್ದಾರೆ. ಈ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಪಿ 40 ಹಾಗೂ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.
ಇತ್ತ ಮೇಘಾಲಯಲ್ಲಿ ಆಡಳಿತಾರೂಢ ಎನ್ಪಿಪಿ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 59 ಸ್ಥಾನಗಳ ಮೇಘಾಲಯ ವಿಧಾನಸಭೆಯಲ್ಲಿ ಎನ್ಪಿಪಿ 20 ಸ್ಥಾನಗಳಲ್ಲಿ ಜಯಗಳಿಸಿದ್ದರೆ,5ರಲ್ಲಿ ಮುನ್ನಡೆ ಸಾಧಿಸಿದೆ.
ಯುನೈಟೆಡ್ ಡೆಮಾಕ್ರಾಟಿಕ್ ಪಕ್ಷವು 11 ಕ್ಷೇತ್ರಗಳಲ್ಲಿ ಜಯಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 5 ಸ್ಥಾನಗಳನ್ನು ಪಡೆದು ಕಳಪೆ ಸಾಧನೆ ಮಾಡಿದೆ. ವಾಯ್ಸಾ ಆಫ್ ಪೀಪಲ್ಸ್ ಪಾರ್ಟಿ 4 ಹಾಗೂ ತೃಣಮೂಲ ಕಾಂಗ್ರೆಸ್ 5 ಸ್ಥಾನಗಳಲ್ಲಿ ಜಯಗಳಿಸಿವೆ. ಬಿಜೆಪಿ 3 ಹಾಗೂ ಎಚ್ಎಸ್ಪಿಡಿಪಿಎರಡು ಕ್ಷೇತ್ರಗಳಲ್ಲಿ ವಿಜಯಗಳಿಸಿದ್ದರೆ, ಉಳಿದ ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಮುಖ್ಯಮಂತ್ರಿ ಕೊನ್ರಾಡ್ ಕೆ. ಸಂಗ್ಮಾ ಅವರು ದಕ್ಷಿಣ ತುರಾ ಕ್ಷೇತ್ರದಲ್ಲಿ ವಿಜಯಗಳಿಸಿದ್ದು, ಚುನಾವಣಾ ಆಯೋಗ ಇನ್ನಷ್ಟೇ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಬೇಕಿದೆ.







