‘ವಿಧಾನಸೌಧ’ ಗಾಂಧಿ ಪ್ರತಿಮೆ ಎದುರು ಶಾಸಕ ಶರತ್ ಬಚ್ಚೇಗೌಡ ಪ್ರತಿಭಟನೆ
ಬೆಂಗಳೂರು, ಮಾ.2: ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾಗಿದ್ದ ಅನುದಾನವನ್ನು ಸಚಿವ ಎಂ.ಟಿ.ಬಿ.ನಾಗರಾಜು ಹಸ್ತಕ್ಷೇಪದಿಂದ ಕಡಿತ ಮಾಡಲಾಗಿದೆ ಎಂದು ಆರೋಪಿಸಿ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಗುರುವಾರ ವಿಧಾನಸೌಧ ಹಾಗೂ ವಿಕಾಸಸೌಧ ನಡುವೆ ಇರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಅಹೋರಾತ್ರಿ ಏಕಾಂಗಿ ಪ್ರತಿಭಟನೆ ಹಮ್ಮಿಕೊಂಡಿರುವ ಅವರು, ನನ್ನ ಕ್ಷೇತ್ರದಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 27 ರಸ್ತೆ ಕಾಮಗಾರಿಗಳಿಗೆ ನೀಡಿದ್ದ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಹಿ ಹಾಕಿದ ನಂತರವು ಅನುದಾನ ಕಡಿತ ಮಾಡಲಾಗಿದೆ ಎಂದು ಆರೋಪಿಸಿದರು.
ಸಚಿವ ಎಂ.ಟಿ.ಬಿ.ನಾಗರಾಜು ಹಸ್ತಕ್ಷೇಪದಿಂದ ಈ ಅನುದಾನವನ್ನು ಕಡಿತ ಮಾಡಲಾಗಿದೆ. ಹೊಸಕೋಟೆ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಸರಕಾರದ ಈ ಧೋರಣೆಯನ್ನು ಖಂಡಿಸಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ. ಸರಕಾರ ಕಡಿತ ಮಾಡಿರುವ ಅನುದಾನವನ್ನು ಬಿಡುಗಡೆ ಮಾಡುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.