ಟರ್ಕಿ ಭೂಕಂಪ: 3 ವಾರದ ಬಳಿಕ ಜೀವಂತ ಪತ್ತೆಯಾದ ನಾಯಿ

ಇಸ್ತಾನ್ಬುಲ್, ಮಾ.2: ಟರ್ಕಿಯಲ್ಲಿ ಫೆಬ್ರವರಿ 6ರಂದು ಸಂಭವಿಸಿದ ಭೀಕರ ಭೂಕಂಪದಲ್ಲಿ ಕುಸಿದುಬಿದ್ದಿರುವ ಕಟ್ಟಡದ ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿದ್ದ ನಾಯಿಯನ್ನು ಮೂರು ವಾರದ ಬಳಿಕ ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಭೂಕಂಪದಲ್ಲಿ ಕುಸಿದುಬಿದ್ದಿರುವ ಲಕ್ಷಾಂತರ ಕಟ್ಟಡಗಳ ಕಲ್ಲುಮಣ್ಣಿನ ರಾಶಿಯಲ್ಲಿ ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿರುವಂತೆಯೇ ಬುಧವಾರ ದಕ್ಷಿಣ ಟರ್ಕಿಯಲ್ಲಿ ಕಲ್ಲುಮಣ್ಣಿನ ರಾಶಿಯಡಿ 2 ಕಾಂಕ್ರೀಟ್ ಸ್ಲ್ಯಾಬ್ನ ನಡುವೆ ಸಿಲುಕಿದ್ದ `ಅಲೆಕ್ಸ್' ಎಂಬ ಹೆಸರಿನ ನಾಯಿ ಪತ್ತೆಯಾಗಿದ್ದು ಅದನ್ನು ರಕ್ಷಿಸಲಾಗಿದೆ. ಮೂರು ವಾರಗಳಿಂದ ಮಣ್ಣಿನಡಿ ಸಿಲುಕಿದ್ದರೂ ನಾಯಿ ಆರೋಗ್ಯದಿಂದಿದ್ದು ಅದನ್ನು ಸ್ಥಳೀಯ ಪ್ರಾಣಿ ರಕ್ಷಣಾ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಕಂಪದ ಅವಶೇಷಗಳಡಿಯಿಂದ ಸಾವಿರಾರು ಜನರನ್ನು ರಕ್ಷಿಸುವ ಜತೆಗೆ, ಬೆಕ್ಕು, ನಾಯಿ, ಮೊಲಗಳು, ಹಕ್ಕಿಗಳನ್ನೂ ರಕ್ಷಿಸಲಾಗಿದ್ದು ಗಾಯಗೊಂಡ ಪಕ್ಷಿ-ಪ್ರಾಣಿಗಳ ಆರೈಕೆಗಾಗಿ ನಿರಾಶ್ರಿತರ ಶಿಬಿರದ ಬಳಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.