ಆಧಾರ್ ಜೋಡಣೆಯಲ್ಲಿ ತೊಂದರೆ: ''7 ವಾರ್ಡ್‍ಗಳಲ್ಲಿ 218 ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸಿಗುತ್ತಿಲ್ಲ''
ಆಕ್ಷನ್ ಏಡ್ ಸಂಸ್ಥೆಯ ವರದಿ

ಬೆಂಗಳೂರು, ಮಾ.2: ಆಧಾರ್ ಜೋಡಣೆಯಾಗದ ಕಾರಣಕ್ಕೆ ನಗರದ ಏಳು ವಾರ್ಡ್‍ಗಳಲ್ಲಿ ವಾಸವಾಗಿರುವ ಅಂಗವಿಕರು, ವೃದ್ದರು ಹಾಗೂ ವಿಧವೆಯರು ಸೇರಿ ಸುಮಾರು 218 ಮಂದಿಗೆ ನೀಡುತ್ತಿದ್ದ ಪಿಂಚಣಿಯನ್ನು ಸರಕಾರವು ನಿಲ್ಲಿಸಿದೆ ಎಂದು ಆಕ್ಷನ್ ಏಡ್ ಸಂಸ್ಥೆಯು ವರದಿ ಪ್ರಕಟಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಸುದಮ ನಗರ ವಾರ್ಡ್, ಕಾಟನ್‍ಪೇಟೆ, ಪಾದರಾಯನಪುರ, ಜಗಜೀವನ್‍ರಾಮ್ ನಗರ, ಚಲುವಾದಿಪಾಳ್ಯ, ಕೆ.ಆರ್. ಮಾರ್ಕೆಟ್ ಹಾಗೂ ಗಾಳಿ ಆಂಜನೇಯ ದೇವಾಸ್ಥಾನ ವಾರ್ಡ್‍ಗಳಲ್ಲಿ ವಾಸವಾಗಿರು ಅರ್ಹ ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಹಾಗೂ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಿಲ್ಲ ಎಂದು ರಾಜ್ಯ ಸರಕಾರವು ಅವರಿಗೆ ಸಣ್ಣ ಮೊತ್ತದ ಮಾಸಿಕ ಪಿಂಚಣಿಯನ್ನು ನಿಲ್ಲಿಸಿದೆ.
ಈ ವಾರ್ಡ್‍ಗಳಲ್ಲಿ ಸುಮಾರು 1,362 ಅರ್ಹ ಫಲಾನುಭವಿಗಳು ವಾಸವಾಗಿದ್ದಾರೆ. ಅವರಲ್ಲಿ 836 ಮಂದಿಗೆ ಸಮಯಕ್ಕೆ ಸರಿಯಾಗಿ ಮಾಸಿಕ ಪಿಂಚಣಿ ಬರುತ್ತಿದೆ. ಆದರೆ ನಾನಾ ಕಾರಣಗಳಿಂದ ಸಕಾಲದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡದ ಕಾರಣ 20 ಅಂಗವಿಕಲರು, 88 ವೃದ್ಧರು ಹಾಗೂ 110 ವಿಧವೆಯರು ಮಾಸಿಕ ಪಿಂಚಣಿ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಮಾಸಿಕ ಪಿಂಚಣಿ ವಂಚಿತರಲ್ಲಿ ಬಹುತೇಕ ಮಂದಿ ಅವಿದ್ಯಾವಂತರಾಗಿದ್ದಾರೆ. ಹಾಗಾಗಿ ಆಧಾರ್ ಸಂಖ್ಯೆಗೆ ನೋಂದಣಿ ಮಾಡುವಾಗ ಸಲ್ಲಿಸಿದ ದೂರವಾಣಿ ಸಂಖ್ಯೆಯನ್ನು ಇರಿಸಿಕೊಂಡಿಲ್ಲ. ಬಹುತೇಕ ಮಂದಿ ಪೋನ್ ಅನ್ನು ಬಳಸದ ಕಾರಣ ಅವರು ತಮ್ಮ ಸಂಬಂಧಿಕರ ಮೊಬೈಲ್ ಸಂಖ್ಯೆಯನ್ನು ನೀಡಿರುತ್ತಾರೆ. ಅಲ್ಲದೆ ಅಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುತ್ತಿರುವ ಕಾರಣ ಕೆಲವರ ಬೆರಳಚ್ಚುಗಳು ಸವೆದು ಹೋಗಿರಿವ ಕಾರಣಕ್ಕೆ ಬಯೋಮೆಟ್ರಿಕ್ ಹೊಂದಾಣಿಕೆ ಆಗುತ್ತಿಲ್ಲ. ಹಾಗಾಗಿ ಆಧಾರ್ ಲಿಂಕ್ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ಷನ್ ಏಡ್ ಸಂಸ್ಥೆಯು ತಿಳಿಸಿದೆ.
ಆಧಾರ್ ಜೋಡನೆಗೆ ಸುಲಭ ಉಪಾಯವನ್ನು ಸರಕಾರ ರೂಪಿಸಬೇಕು. ಫಲಾನುಭವಿಗಳು ಇರುವ ಸ್ಥಳಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ, ದಾಖಲೆಗಳನ್ನು ಪಡೆದುಕೊಳ್ಳಬೇಕು. ಆಧಾರ್ ಜೋಡನೆಯ ಬಳಿಕ ಎಂದಿನಿಂದ ಪಿಂಚಣಿಯನ್ನು ನಿಲ್ಲಿಸಿದೆಯೋ ಅಂದಿನಿಂದಲೇ ಸರಕಾರವು ಫಲಾನುಭವಿಗಳಿಗೆ ನೀಡಬೇಕು ಎಂದು ಆಕ್ಷನ್ ಏಡ್ ಸಂಸ್ಥೆಯು ಆಗ್ರಹಿಸಿದೆ.
‘ಒಂದು ವೇಳೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದರೆ, ಲಿಂಕ್ ಮಾಡಿದ ತಿಂಗಳಿನಿಂದ ಪಿಂಚಣಿ ಬರುತ್ತಿದೆಯೇ, ಹೊರತು ಮಾಸಿಕ ಪಿಂಚಣಿಯು ಮನಿಂತು ಹೋದ ತಿಂಗಳಿನಿಂದ ಪಿಂಚಣಿಯನ್ನು ಸರಕಾರ ನೀಡುತ್ತಿಲ್ಲ. ಇದು ಅರ್ಹ ಫಲಾನುಭವಿಗಳನ್ನು ಯೋಜನೆಗಳಿಂದ ಹೊರಗಿಡುವ ಹುನ್ನಾರವಾಗಿದೆ. ಸರಕಾರ ಯೋಜನೆಗಳನ್ನು ಗೋಷಣೆ ಮಾಡುವ ಜವಾಬ್ದಾರಿಯನ್ನು ಮಾತ್ರ ಹೊರಬಾದರು. ಯೋಜನೆಗಳನ್ನು ಅರ್ಹರಾದ ಪ್ರತಿಯೊಬ್ಬ ಫಲಾನುಭವಿಗೂ ದೊರೆಯುವಂತೆ ನೋಡಿಕೊಳ್ಳಬೇಕು’
-ನಂದಿನಿ, ಆಕ್ಷನ್ ಏಡ್ ಸಂಸ್ಥೆ ಪ್ರತಿನಿಧಿ