ಕೆಎಸ್ ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ಸಲ್ಲಿಕೆ
ಲಂಚ ಸ್ವೀಕಾರ ಪ್ರಕರಣದಲ್ಲಿ ಪುತ್ರನ ಬಂಧನದ ಹಿನ್ನೆಲೆ

ಬೆಂಗಳೂರು, ಮಾ.3: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ ಡಿಎಲ್) ಟೆಂಡರ್ ಗೆ ಸಂಬಂಧಿಸಿದ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡಾಗಿ ತನ್ನ ಪುತ್ರ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಕೆಎಸ್ ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮುಖ್ಯಮಂತ್ರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಈ ಪ್ರಕರಣದಲ್ಲಿ ತನ್ನ ಯಾವುದೇ ಪಾತ್ರವಿಲ್ಲ. ತನ್ನ ಹಾಗು ಕುಟುಂಬದ ವಿರುದ್ಧ ಷಡ್ಯಂತ್ರ ನಡೆದಿದೆ. ಪಕ್ಷಕ್ಕೆ ಮುಜುಗರ ಆಗದಿರಲಿ ಎಂಬ ಕಾರಣಕ್ಕೆ ನೈತಿಕ ಹೊಣೆ ಹೊತ್ತು ಕೆಎಸ್ ಡಿಎಲ್ ನಿಗಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಉಲ್ಲೇಖಿಸಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ ಡಿಎಲ್) ಟೆಂಡರ್ ಗೆ ಸಂಬಂಧಿಸಿ ಲಂಚ ಪಡೆಯುತ್ತಿದ್ದ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದರು. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಅವರ ಖಾಸಗಿ ಕಚೇರಿಯಿಂದ 1.62 ಕೋಟಿ ರೂ. ನಗದು ಹಾಗೂ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಅವರ ಮನೆಯಿಂದ ಆರು ಕೋಟಿ ರೂ. ನಗದನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ.