ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಗೆ ವಿದೇಶಿ ಕೊಕೋ ಆಮದಿಗೆ ಚಿಂತನೆ: ಕಿಶೋರ್ ಕುಮಾರ್ ಕೊಡ್ಗಿ
ಹಿರಿಯಡ್ಕದಲ್ಲಿ ಮೂರು ದಿನಗಳ ಕೃಷಿ ಮೇಳ, ಸಾಂಸ್ಕೃತಿಕ ವೈಭವಕ್ಕೆ ಚಾಲನೆ

ಉಡುಪಿ, ಮಾ.3: ಕ್ಯಾಂಪ್ಕೋದ ಚಾಕಲೇಟ್ ಫ್ಯಾಕ್ಟರಿಗೆ ಕೊಕೋ ಉತ್ಪತ್ತಿ ಸಾಕಾಗುತ್ತಿಲ್ಲ. ಅದಕ್ಕೆ ನಾವು ಹೊರ ದೇಶದಿಂದ ಕೋಕೊ ಆಮದು ಮಾಡಲು ಯೋಚನೆ ಮಾಡುತ್ತಿದ್ದೇವೆ. ನಮ್ಮ ಫ್ಯಾಕ್ಟರಿ ಮುಂದುವರಿಯಬೇಕಾದರೆ ಹೊರದೇಶವನ್ನು ಅವಲಂಬಿಸಬೇಕಾಗಿರುವುದು ಅನಿವಾರ್ಯ ಎಂದು ಮಂಗಳೂರಿನ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ ಪರ್ಕಳ, ವೆನಿಲ್ಲಾ ಅಭಿವೃದ್ಧಿ ಟ್ರಸ್ಟ್ ಹಿರಿಯಡ್ಕ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮತ್ತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ನೈಸರ್ಗಿಕ ಕೃಷಿ ಯೋಜನೆ ವಲಯ- 10, ವಲಯ ಕೃಷಿ ತೋಟ ಸಂಘ ಕೇಂದ್ರ ಬ್ರಹ್ಮಾವರ, ಜಿಲ್ಲಾ ಕೃಷಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯಡ್ಕ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಜಗತ್ತಿನಲ್ಲಿ ವೆನಿಲ್ಲಾ ಬೇಡಿಕೆ ಹೆಚ್ಚಾಗಿದೆ. ಅದರ ಪುನರ್ ಸ್ಥಾಪನೆ ಮಾಡಲು ತಜ್ಞರು ಪರಿಣಿತರು ಕೈಜೋಡಿಸಬೇಕು. ಇದರಿಂದ ರೈತರ ಆದಾಯ ಹೆಚ್ಚಾಗಲಿದೆ. ಕೋಕೋ ಜೊತೆ ಔಷಧಿಯ ಸಸ್ಯಗಳಿಗೂ ಪ್ರೋತ್ಸಾಹ ನೀಡಲು ಕ್ಯಾಂಪ್ಕೊ ಯೋಜಿಸುತ್ತಿದ್ದೇವೆ ಎಂದು ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.
ಅಡಿಕೆ ಧಾರಣೆ ಹೆಚ್ಚಾದ ಪರಿಣಾಮ ರೈತರು ಕೊಕೊ ಗಿಡ ಕಡಿದು ಅಡಿಕೆ ಬೆಳೆಸಿದರು. ಕೇವಲ ಅಡಿಕೆ ತೋಟವನ್ನು ನಂಬುವ ಸ್ಥಿತಿ ಇಂದು ಇಲ್ಲ. ಅಡಿಕೆ ಧಾರಣೆ ಇದೇ ರೀತಿ ಸ್ಥಿರವಾಗಿ ಇರುತ್ತದೆ ಎಂಬುದು ಹೇಳಲು ಆಗುವುದಿಲ್ಲ. ಇಂದು ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಅಡಿಕೆ ಬೆಳೆಯುತ್ತಿದ್ದಾರೆ. ರಾಜ್ಯದ ಬಯಲು ಸೀಮೆಯಲ್ಲೂ ಅಡಿಕೆ ತೋಟ ಮಾಡಲಾಗುತ್ತಿದೆ. ಇದು ಒಳ್ಳೆಯ ಲಕ್ಷ್ಮಣ ಅಲ್ಲ. ಪಾರಂಪರಿಕವಾಗಿ ಕೃಷಿ ಮಾಡುತ್ತಿರುವ ಮಲೆನಾಡು, ಕರಾವಳಿ ಭಾಗದ ಕೃಷಿಕರಿಗೆ ಬಹಳ ದೊಡ್ಡ ತೊಂದರೆ ಆಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸರಕಾರಗಳು ರೈತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಉತ್ತಮ ಬದುಕಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದೆ. ಆದರೆ ರೈತರು ಅದನ್ನು ಎಷ್ಟು ಸದುಪಯೋಗ ಮಾಡುತ್ತಿದ್ದಾರೆಂಬುದು ಪ್ರಶ್ನೆ. ರೈತರು ಇಂದು ಕೇವಲ ಟೀಕೆ ಟಿಪ್ಪಣಿ ಮಾಡುವುದರಲ್ಲಿ ಕಾಲ ವ್ಯಯ ಮಾಡುತಿದ್ದಾರೆ. ಸಂಶೋಧನೆ ವಿಚಾರವಾಗಿ ವಿಜ್ಞಾನಿಗಳನ್ನು ಟೀಕಿಸುವ ಮತ್ತು ಅವಹೇಳನ ಮಾಡುವ ಕಾರ್ಯವನ್ನು ರೈತರು ಬಿಡಬೇಕು. ಅಡಿಕೆಗೆ ಬಂದ ಮಾರಕ ಕಾಯಿಲೆಗಳ ಪರಿಹಾರ ಕೇವಲ ವಿಜ್ಞಾನಿಗಳಿಂದ ಮಾತ್ರ ಸಾಧ್ಯವಿಲ್ಲ ಎಂದರು.
ರೈತರು ಪ್ರಯೋಗಶೀಲರಾಗಬೇಕು. ಮುಂದಿನ ದಿನಗಳಲ್ಲಿ ಯುವ ಸಮು ದಾಯ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದರೂ ಇಂದು ಯಾವುದೇ ಉದ್ಯೋಗ ಸಿಗುತ್ತಿಲ್ಲ. ಆದುದರಿಂದ ಯುವ ಜನತೆ ಸ್ವಾವಲಂಬಿಯಾಗಿ ಬದುಕಲು ಹೈನುಗಾರಿಕೆ, ಮತ್ಸೋದ್ಯಮ ಸೇರಿದಂತೆ ಕೃಷಿ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ವಸ್ತು ಪ್ರದರ್ಶನವನ್ನು ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಉದ್ಘಾಟಿಸಿದರು. ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ಬಿ.ಹೇಮ್ಲಾ ನಾಯಕ್ ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು.
ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯ ಶ್ಯಾಮಲಾ ಕುಂದರ್, ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಹೆರ್ಗ ವ್ಯವಸಾಯ ಸೇವಾ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ನಾಯಕ್, ರೈತರ ಸಹಕಾರಿ ಸಂಘದ ಅಧ್ಯಕ್ಷ ಬಿ.ಅಶೋಕ್ ಕುಮಾರ್ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷೆ ಲತಾ ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಡಾ.ಮೃತ್ಯುಂಜಯ ವಾಲಿ, ಬ್ರಹ್ಮಾವರ ಕೃಷಿ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್ ವಹಿಸಿದ್ದರು. ಕೃಷಿ ಮೇಳ ಸಮಿತಿ ಗೌರವಾಧ್ಯಕ್ಷ ಪಳ್ಳಿ ನಟರಾಜ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಸ್ವಾಗತಿಸಿದರು. ಉಪನ್ಯಾಸಕಿ ನಳಿನಿ ಎಂ.ಆರ್. ಕಾರ್ಯ ಕ್ರಮ ನಿರೂಪಿಸಿದರು.
‘ರೈತರು ಇಂದು ಸರಕಾರದ ಸಬ್ಸಿಡಿ ಹಣಕ್ಕೆ ಅಪೇಕ್ಷೆ ಪಡದೆ ಸ್ವಾವಲಂಬಿಗಳಾಗಬೇಕಾಗಿದೆ. ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ರೈತರು ಇನ್ನು ಕೂಡ ಸರಕಾರದಿಂದ ಸಿಗುವ ಸಬ್ಸಿಡಿ ಹಣಕ್ಕೆ ಕಾಯುತ್ತಿದ್ದಾರೆ. ಅದರ ಬದಲು ರೈತರು ನಾನು ದೇಶಕ್ಕೆ ಏನು ಕೊಡಲು ಸಾಧ್ಯ ಎಂಬ ಕಲ್ಪನೆಯೊಂದಿಗೆ ಕೆಲಸ ಮಾಡಬೇಕು’
-ಕಿಶೋರ್ ಕೊಡ್ಗಿ, ಅಧ್ಯಕ್ಷರು, ಮಂಗಳೂರು ಕ್ಯಾಂಪ್ಕೊ
ಹಳದಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ!
ಕೃಷಿಮೇಳದ ವಿಶೇಷ ಆಕರ್ಷಣೆಯಾಗಿರುವ ಪ್ರಗತಿಪರ ಕೃಷಿಕ ಸುರೇಶ್ ನಾಯಕ್ ಮುಂಡುಜೆ ಬೆಳೆದ ಹಳದಿ ಬಣ್ಣದ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಕಂಡುಬಂತು.
ಇವರು ಥೈವಾನ್‌ನ ನೋನಿಯೋ ಸೀಡ್ಸ್ ತುಮಕೂರಿನಿಂದ ತಂದು ಮಲ್ಚಿಂಗ್ ವ್ಯವಸ್ಥೆಯಡಿ ಕರಾವಳಿಯಲ್ಲೇ ಮೊದಲ ಬಾರಿಗೆ ಬಿತ್ತಿ ಬೆಳೆದಿದ್ದಾರೆ. ಇದರ ವಿಶೇಷ ಅಂದರೆ ಹಳದಿ ಬಣ್ಣದ ಕಲ್ಲಂಗಡಿಯೊಳಗೆ ಕೆಂಪು ಬಣ್ಣ ಇದ್ದರೆ, ಹಸಿರು ಬಣ್ಣದ ಕಲ್ಲಂಗಡಿಯೊಳಗೆ ಹಳದಿ ಬಣ್ಣ ಇರುವುದು. ಈ ವಿಶೇಷ ಕಲ್ಲಂಗಡಿಯನ್ನು ಜನ ಮುಗಿಬಿದ್ದು ಖರೀದಿಸಿದರು.
ಅದೇ ರೀತಿ ಮೇಳದಲ್ಲಿ ಕೃಷಿ ಪರಿಕರಗಳು, ಚನ್ನರಾಯಪಟ್ಟಣದ ಆಟಿಕೆ ಸಾಮಗ್ರಿಗಳು, ಮಣ್ಣಿನ ಆಲಂಕಾರಿಕ ವಸ್ತುಗಳು, ವಿವಿಧ ಜಾತಿಯ ಗಿಡಗಳು ಆಕರ್ಷಣೀಯವಾಗಿವೆ.


