ಈಜಿಪ್ಟ್ ನ ಗ್ರೇಟ್ ಪಿರಮಿಡ್ ನಲ್ಲಿ ರಹಸ್ಯ ಕೋಣೆ ಪತ್ತೆ

ಕೈರೊ: ಗಿಝಾದಲ್ಲಿರುವ 4,500 ವರ್ಷಗಳಷ್ಟು ಹಳೆಯದಾದ ಪಿರಮಿಡ್ ಆಫ್ ಖುಫು ಅಥವಾ ಗ್ರೇಟ್ ಪಿರಮಿಡ್ ಒಳಗೆ ರಹಸ್ಯ ಕೋಣೆಯೊಂದನ್ನು ಈಜಿಪ್ಟ್ ನ ಪುರಾತತ್ವ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಸ್ಕ್ಯಾನ್ ಪಿರಮಿಡ್ಸ್ ಯೋಜನೆಯಲ್ಲಿ ರಹಸ್ಯ ಕೋಣೆ ಪತ್ತೆಯಾಗಿರುವುದನ್ನು ಪುರಾತತ್ವ ಶಾಸ್ತ್ರಜ್ಞ ಝಹಿ ಹವಸ್ ಮತ್ತು ಪ್ರವಾಸೋದ್ಯಮ ಸಚಿವ ಅಹ್ಮದ್ ಇಸ್ಸಿಯಾ ಅವರು ಗುರುವಾರ ಪ್ರಕಟಿಸಿದರು.
2016ರಲ್ಲಿ ಆರಂಭಗೊಂಡ ಸ್ಕ್ಯಾನ್ಪಿರಮಿಡ್ಸ್ ಪುರಾತನ ಕಟ್ಟಡಗಳು ಮತ್ತು ರಚನೆಗಳ ಅಧ್ಯಯನಕ್ಕಾಗಿ ಇನ್ಫ್ರಾರೆಡ್ ಥರ್ಮೊಗ್ರಫಿ, ಅಲ್ಟ್ರಾಸೌಂಡ್, 3ಡಿ ಸಿಮ್ಯುಲೇಷನ್ಸ್ ಮತ್ತು ಕಾಸ್ಮಿಕ್ ರೇ ರೇಡಿಯೊಗ್ರಫಿ ಬಳಸುವ ವಿವಿಧ ಅತ್ಯಾಧುನಿಕ ಉಪಕರಣಗಳ ಮೂಲಕ ಸಂಶೋಧನೆಗಳನ್ನು ನಡೆಸುವ ಅಂತರರಾಷ್ಟ್ರೀಯ ಯೋಜನೆಯಾಗಿದೆ.
ಪಿರಮಿಡ್ನ ಮುಖ್ಯ ಪ್ರವೇಶ ದ್ವಾರದ ಮೇಲಿರುವ ಸೀಲ್ ಮಾಡಲಾಗಿರುವ ಕಾರಿಡಾರ್ ಅನ್ನು ಪತ್ತೆ ಹಚ್ಚಲು ವಿಜ್ಞಾನಿಗಳು ಈ ತಂತ್ರಜ್ಞಾನವನ್ನು ಬಳಸಿದ್ದರು. ಹೊರಗಿನಿಂದ ಪ್ರವೇಶಿಸಲು ಸಾಧ್ಯವಿಲ್ಲದ ಈ ಕಾರಿಡಾರ್ ಒಂಬತ್ತು ಮೀ.(29.5 ಅಡಿ) ಉದ್ದ ಮತ್ತು ಎರಡು ಮೀ.(6.5 ಅಡಿ) ಅಗಲವಿದೆ. ಪಿರಮಿಡ್ನ ಕಲ್ಲುಗಳ ಸಂದಿಯ ಮೂಲಕ ಸಣ್ಣವ್ಯಾಸದ ಜಪಾನೀಸ್ ಎಂಡೋಸ್ಕೋಪ್ ಅನ್ನು ಒಳಗೆ ತೂರಿಸುವ ಮೂಲಕ ವಿಜ್ಞಾನಿಗಳು ಈ ರಹಸ್ಯ ಕಾರಿಡಾರ್ನ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪಿರಮಿಡ್ ನ ಒಡಲಲ್ಲಿ ಇಂತಹ ಇನ್ನೂ ಹಲವು ರಹಸ್ಯಗಳಿರಬಹುದು ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದಾರೆ.
ಗ್ರೇಟ್ ಪಿರಮಿಡ್ ಪ್ರಾಚೀನ ವಿಶ್ವದ ಏಳು ಅದ್ಭುತಗಳ ಪೈಕಿ ಈಗ ಉಳಿದುಕೊಂಡಿರುವ ಏಕೈಕ ರಚನೆಯಾಗಿದೆ.
The new Great Pyramid corridor… Is it a dead end? The mystery deepens pic.twitter.com/SmXH8IZrE1
— Matt Sibson (@MattSibson) March 2, 2023