2035ರ ವೇಳೆಗೆ ವಿಶ್ವದ ಅರ್ಧಕ್ಕೂ ಹೆಚ್ಚಿನ ಜನರು ಅಧಿಕ ತೂಕ ಅಥವಾ ಬೊಜ್ಜು ಹೊಂದಿರುತ್ತಾರೆ: ವರದಿ
ಲಂಡನ್: ಹೊಸ ಅಧ್ಯಯನ ವರದಿಯೊಂದು 2035ರ ವೇಳೆಗೆ ವಿಶ್ವದಲ್ಲಿಯ ಅರ್ಧಕ್ಕೂ ಹೆಚ್ಚಿನ ಜನರು ಅಧಿಕ ತೂಕವನ್ನು ಅಥವಾ ಬೊಜ್ಜು ಹೊಂದಿರುತ್ತಾರೆ ಎಂದು ಹೇಳಿದೆ.
ಮುಂದಿನ 12 ವರ್ಷಗಳಲ್ಲಿ ವಿಶ್ವದ ಜನಸಂಖ್ಯೆಯ ಶೇ.51ರಷ್ಟು ಅಥವಾ 400 ಕೋ.ಗೂ.ಹೆಚ್ಚಿನ ಜನರು ಅಧಿಕ ತೂಕವನ್ನು ಅಥವಾ ಬೊಜ್ಜು ಹೊಂದಿರುತ್ತಾರೆ ಎಂದು ವರ್ಲ್ಡ್ ಒಬೆಸಿಟಿ ಫೆಡರೇಷನ್ (ಡಬ್ಲ್ಯುಒಎಫ್) ತನ್ನ ವರದಿಯಲ್ಲಿ ಅಂದಾಜಿಸಿದೆ.
ಬೊಜ್ಜು ವಿಶೇಷವಾಗಿ ಮಕ್ಕಳಲ್ಲಿ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ತ್ವರಿತವಾಗಿ ಹೆಚ್ಚುತ್ತಿದೆ ಎಂದು ವರದಿಯು ಬೆಟ್ಟು ಮಾಡಿದೆ.
ವರದಿಯನ್ನು ‘ಸ್ಪಷ್ಟವಾದ ಎಚ್ಚರಿಕೆ' ಎಂದು ಬಣ್ಣಿಸಿರುವ ಡಬ್ಲ್ಯುಒಎಫ್ ಅಧ್ಯಕ್ಷೆ ಲೂಯಿಸೆ ಬೌರ್ ಅವರು, ಪರಿಸ್ಥಿತಿ ಹದಗೆಡುವುದನ್ನು ತಡೆಯಲು ನೀತಿ ನಿರೂಪಕರು ಈಗ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದಿದ್ದಾರೆ.
ಮಕ್ಕಳು ಮತ್ತು ಹದಿಹರೆಯದವರಲ್ಲಿ ಬೊಜ್ಜು ಕ್ಷಿಪ್ರವಾಗಿ ಹೆಚ್ಚುತ್ತಿರುವುದು ವಿಶೇಷ ಚಿಂತೆಯ ವಿಷಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಬೌರ್, ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವೆಚ್ಚಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದನ್ನು ತಪ್ಪಿಸಲು ವಿಶ್ವಾದ್ಯಂತದ ಸರಕಾರಗಳು ಮತ್ತು ನೀತಿ ನಿರೂಪಕರು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಿದೆ ಎಂದಿದ್ದಾರೆ.
ಬಾಲ್ಯದ ಸ್ಥೂಲಕಾಯತೆಯು 2020ರಲ್ಲಿಯ ಮಟ್ಟಕ್ಕೆ ಹೋಲಿಸಿದರೆ 2035ರಲ್ಲಿ ದುಪ್ಪಟ್ಟಿಗೂ ಅಧಿಕವಾಗಲಿದ್ದು, 20.8 ಕೋಟಿ ಬಾಲಕರು ಮತ್ತು 17.5 ಕೋಟಿ ಬಾಲಕಿಯರು ಅಧಿಕ ಬೊಜ್ಜು ಹೊಂದಿರಲಿದ್ದಾರೆ ಎಂದು ವರದಿಯು ತಿಳಿಸಿದೆ. ಅಧಿಕ ತೂಕಕ್ಕೆ ಸಂಬಂಧಿಸಿದ ಆರೋಗ್ಯ ಸ್ಥಿತಿಗಳ ಪರಿಣಾಮವಾಗಿ 2035ರ ವೇಳೆಗೆ ಸಮಾಜಕ್ಕೆ ಆಗುವ ವೆಚ್ಚವು ವಾರ್ಷಿಕ ನಾಲ್ಕು ಲಕ್ಷ ಕೋಟಿ .ಡಾಲರ್ ಗೂ ಅಧಿಕವಿರಲಿದೆ (ಜಾಗತಿಕ ಜಿಡಿಪಿಯ ಶೇ.3) ಎಂದು ಅದು ಬೆಟ್ಟು ಮಾಡಿದೆ.
ತಾವು ವ್ಯಕ್ತಿಗಳನ್ನು ದೂರುತ್ತಿಲ್ಲ, ಆದರೆ ಇಂತಹ ಸ್ಥಿತಿಗಳಿಗೆ ಕಾರಣವಾಗುವ ಸಾಮಾಜಿಕ, ಪಾರಿಸರಿಕ ಮತ್ತು ಜೈವಿಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ಕರೆ ನೀಡುತ್ತಿರುವುದಾಗಿ ವರದಿಯ ಲೇಖಕರು ಹೇಳಿದ್ದಾರೆ.
2020ರಲ್ಲಿ 260 ಕೋಟಿ ಅಥವಾ ವಿಶ್ವದ ಜನಸಂಖ್ಯೆಯ ಶೇ.38ರಷ್ಟು ಜನರು ಅತಿಯಾದ ತೂಕ ಮತ್ತು ಬೊಜ್ಜು ಹೊಂದಿದ್ದರು ಎಂದು ವರದಿಯು ಹೇಳಿದೆ. ಮುಂಬರುವ ವರ್ಷಗಳಲ್ಲಿ ಏಷ್ಯಾ ಮತ್ತು ಆಫ್ರಿಕಾದ ಕಡಿಮೆ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ಬೊಜ್ಜುದೇಹಿಗಳ ಸಂಖ್ಯೆಯಲ್ಲಿ ಅತ್ಯಂತ ಹೆಚ್ಚಿನ ಏರಿಕೆಯನ್ನು ನಿರೀಕ್ಷಿಸಲಾಗಿದೆ ಎಂದೂ ವರದಿಯು ತಿಳಿಸಿದೆ.