ಕೇಂದ್ರ-ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ದೇಶದ ಜನ ಅರ್ಥ ಮಾಡಿಕೊಂಡಿದ್ದಾರೆ: ಬಿ.ಕೆ. ಹರಿಪ್ರಸಾದ್
ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟನೆ

ಬೆಳ್ತಂಗಡಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಇದನ್ನು ದೇಶದ ಜನ ಅರ್ಥ ಮಾಡಿಕೊಂಡಿದ್ದಾರೆ. ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಕಳೆದ ಬಾರಿ ವಿಧಾನಸಭಾ ಚುನಾವಣೆ ಗೆದ್ದಿದ್ದರು ಈ ಬಾರಿಯೂ ಅದೇ ತಂತ್ರ ಅನುಸರಿಸಲು ಸಿದ್ಧರಾಗಿದ್ದರೆ ಇವರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು.
ಅವರು ಶುಕ್ರವಾರ ಅಳದಂಗಡಿ ಬಸ್ ನಿಲ್ದಾಣ ಬಳಿ ನಡೆದ ಕಾಂಗ್ರೆಸ್ ಪಕ್ಷದ ಕರಾವಳಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ಯಾಸ್ ಬೆಲೆಯನ್ನು ಒಂದು ಸಾವಿರದ ಮೇಲೆ ಏರಿಸಿರುವುದೇ ಬಿಜೆಪಿ ಸಾಧನೆಯಾಗಿದೆ. ಇದೇ ಮೋದಿಯವರು ಹೇಳಿದ ಅಚ್ಚೇ ದಿನ್ ಆಗಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಕರಾವಳಿಯ ಜನ ಅವಕಾಶ ನೀಡಬಾರದು ರಾಜಕೀಯದಲ್ಲಿ ಸಂವಿಧಾನವೇ ಪವಿತ್ರವಾಗಿದ್ದು ಅದನ್ನು ಗೌರವಿಸದವರು ಅಲ್ಲಿರಬಾರದು ಎಂದರು.
ಬಿಜೆಪಿ ಸಂಸದೆ ಮನೆಯಲ್ಲಿ ಹರಿತವಾದ ಆಯುಧಗಳನ್ನು ಇಡಿ ಎನ್ನುತ್ತಾರೆ. ನಮ್ಮ ಮಕ್ಕಳನನ್ನು ಇದು ಎಲ್ಲಿಗೆ ಕೊಂಡೊಯ್ಯಲಿದೆ ಮಕ್ಕಳ ಕೈಗೆ ಪುಸ್ತಕ ಕೊಡಿ ಎಂದು ನಾವು ಹೇಳುತ್ತಿದ್ದೇವೆ. ಆಯುಧಗಳೊಂದಿಗೆ ಬೀದಿಗೆ ಬರಲು ಕರೆಕೊಡುವವರು ಮೊದಲು ತಮ್ಮ ಮಕ್ಕಳನ್ನು ಬೀದಿಗೆ ಕಳುಹಿಸಲಿ ಎಂದರು.
ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ ಕಾಂಗ್ರೆಸ್ ಮುಖಂಡರ ವಿದೇಶಿ ಕಪ್ಪುಹಣ ತರಿಸಿ ಭಾರತದ ಪ್ರತಿಯೊಬ್ಬರಿಗೂ 15 ಲಕ್ಷ ಹಣ ಖಾತೆಗೆ ಜಮಾ ಗೊಳಿಸುತ್ತೇವೆ ಎಂದವರು ಎಲ್ಲಿದ್ದಾರೆ. ಇವರಿಗೆ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷದ ನಾಯಕರ ಭ್ರಷ್ಟಾಚಾರ ಬಯಲಿಗೆ ತರಲಿ. ಕಾಂಗ್ರೆಸ್ ಯಾವತ್ತು ಪಕ್ಷದಲ್ಲಿ ಬ್ರಷ್ಟಾಚಾರಿಗಳಿಗೆ ಅವಕಾಶ ನೀಡೋದಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ಅರುವತ್ತು ವರ್ಷಗಳ ಆಡಳಿತದ ಜನಪರ ಕಾರ್ಯಕ್ರಮ ಮತ್ತು ಈ ಬಾರಿ ಪಕ್ಷ ಮುಂದಿಟ್ಟಿರುವ ಮೂರೂ ಭರವಸೆಗಳ ಬಗ್ಗೆ ವಿವರಿಸಿ ಪ್ರತಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ರೂ ಖಾತೆಗೆ, ಕರಾವಳಿ ಅಭಿವೃದ್ಧಿ ಪ್ರಾದಿಕಾರ ಮೇಲ್ದರ್ಜೆಗೆ ಏರಿಸಿ 2500 ಕೋಟಿ ಮೀಸಲು,197 ಅತಿ ಸೂಕ್ಷ್ಮ ಹಿಂದುಳಿದ ಸಮುದಾಯದದ ಅಭಿವೃದ್ಧಿಗೆ ವಿಷೇಷ ಅನುದಾನ ನೀಡುವ ಚಿಂತನೆ ಕಾಂಗ್ರೆಸ್ ಮಾಡಿದ್ದು ಈ ಬಗ್ಗೆ ಜನರಿಗೆ ತಿಳಿಸುವ ಕಾರ್ಯವನ್ನು ಕರ್ಯಕರ್ತರು ಮಾಡಬೇಕು ಎಂದರು. ಮುಂದೆ ಕಾಂಗ್ರೆಸ್ ಅಧಿಕಾರ ಬರವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ನಿನ್ನೆ ಬೆಂಗಳೂರಿನಲ್ಲಿ ಶಾಸಕರ ಮನೆಯಲ್ಲಿ ಹಣ ವಶಪಡಿಸಿಕೊಂಡಿರುವುದು ಬಿಜೆಪಿಯ ಭ್ರಷ್ಟಾಚಾರವನ್ನು ಇನ್ನಷ್ಟು ಬಯಲಿಗೆಳೆದಿದೆ ಎಂದರು.
ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಕೆ ಗಂಗಾಧರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಗೌಡ, ಶೈಲೇಶ್ ಕುಮಾರ್, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಪಕ್ಷದ ಮುಖಂಡರುಗಳಾದ ಅಬಿನಂದನ್ ಹರೀಶ್ ಕುಮಾರ್, ಕೃಷ್ಣ ಮೂರ್ತಿ ಕಾರ್ಕಳ, ಪ್ರಶಾಂತ್ ವೇಗಸ್, ಶೇಖರ್ ಕುಕ್ಕೇಡಿ, ಬಿ ಕೆ ವಸಂತ್, ರಾಜಶೇಖರ ಅಜ್ರಿ, ಶಶಿದರ ಹೆಗ್ಡೆ ಮಂಗಳೂರು, ಮನೋಹರ್ ಕುಮಾರ್ ,ಅನಿಲ್ ಪೈ, ಅಬ್ದುಲ್ ರಹಿಮಾನ್ ಪಡ್ಪು, ಕೇಶವ ಗೌಡ, ಸತೀಶ್ ಅಳದಂಗಡಿ, ಅಶ್ರಫ್ ನೆರಿಯ, ನಮಿತಾ , ಸಲಿಂ ಗುರುವಾಯನಕೆರೆ, ಶಾಹುಲ್ ಹಮೀದ್ ಮುಂತಾದವರು ಉಪಸ್ಥಿತರಿದ್ದರು.
ಕೆ ಹರೀಶ್ ಕುಮಾರ್ ಸ್ವಾಗತಿಸಿ, ಪ್ರಶಾಂತ್ ವೇಗಸ್ ವಂದಿಸಿದರು. ಸಂದೀಪ್ ನೀರಲ್ಕೆ, ಸಲಿಂ ಗುರುವಾಯನ ಕೆರೆ ಕಾರ್ಯಕ್ರಮ ನಿರೂಪಿಸಿದರು.