ಮಾ. 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 28 ಪರೀಕ್ಷಾ ಕೇಂದ್ರಗಳು, 15,504 ವಿದ್ಯಾರ್ಥಿಗಳು
ಉಡುಪಿ: ಮಾ.9ರಿಂದ 29ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ಒಟ್ಟು 15,504 ಮಂದಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಉಡುಪಿ ತಾಲೂಕಿನಲ್ಲಿ 10, ಕಾರ್ಕಳದಲ್ಲಿ 6, ಕುಂದಾಪುರದಲ್ಲಿ 12 ಸೇರಿ ಒಟ್ಟು 28 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಕುಂದಾಪುರದ ಆರ್.ಎನ್.ಶೆಟ್ಟಿ ಪಿಯು ಕಾಲೇಜಿನಲ್ಲಿ ಅತ್ಯಧಿಕ 866 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ಉಡುಪಿಯ ಎಂಜಿಎಂ ಪಿಯು ಕಾಲೇಜು ಕೇಂದ್ರದಲ್ಲಿ 848 ಮಂದಿ ಪರೀಕ್ಷೆ ಬರೆಯಲಿದ್ದಾರೆ.
ಹೆಬ್ರಿಯ ಸರಕಾರಿ ಪಿಯು ಕಾಲೇಜಿನಲ್ಲಿ 743, ಕಾರ್ಕಳದ ಎಸ್‌ವಿಟಿ ಪಿಯು ಕಾಲೇಜಿನಲ್ಲಿ 735, ಕುಂದಾಪುರದ ಸರಕಾರಿ ಪಿಯು ಕಾಲೇಜಿನಲ್ಲಿ 723, ಉಡುಪಿಯ ಬಾಲಕಿಯರ ಸರಕಾರಿ ಪ.ಪೂ.ಕಾಲೇಜಿನ 692 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಮಾ.9ರಂದು ಕನ್ನಡ, 11ರಂದು ಗಣಿತ, 13ರಂದು ಅರ್ಥಶಾಸ್ತ್ರ, 14ರಂದು ರಸಾಯನ ಶಾಸ್ತ್ರ, 16ರಂದು ಬ್ಯುಸಿನೆಸ್ ಸ್ಟಡೀಸ್, 18ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ, 20ರಂದು ಇತಿಹಾಸ, ಭೌತಶಾಸ್ತ್ರ, 21ರಂದು ಹಿಂದಿ, 23ರಂದು ಇಂಗ್ಲೀಷ್, 25ರಂದು ರಾಜ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ, 27ರಂದು ಲೆಕ್ಕ ಶಾಸ್ತ್ರ, 29ರಂದು ಸಮಾಜ ಶಾಸ್ತ್ರ, ಇಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್‌ಸಾಯನ್ಸ್ ಪರೀಕ್ಷೆಗಳು ನಡೆಯಲಿವೆ.