ಮಂಗಳೂರು: ಪೆಟ್ರೋಲ್ ಚಾಲಿತ ಮತ್ತು ಇ-ಆಟೊ ಚಾಲಕರ ಮಧ್ಯೆ ವಾಗ್ವಾದ

ಮಂಗಳೂರು: ನಿಗದಿತ ಬಣ್ಣವನ್ನು ಬಳಿಯದ ಹಾಗೂ ವಲಯ ಸಂಖ್ಯೆ ನಮೂದಿಸದ ಇಲೆಕ್ಟ್ರಿಕ್ (ಇ ಆಟೋ) ಆಟೋ ರಿಕ್ಷಾಗಳಿಗೆ ತಂಗುದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡಬಾರದು ಎಂಬುದಾಗಿ ಪೆಟ್ರೋಲ್ ಚಾಲಿತ ಕೆಲವು ಆಟೋರಿಕ್ಷಾ ಚಾಲಕರು ನಗರದ ಕೆಲವು ರಿಕ್ಷಾ ಪಾರ್ಕ್‌ಗಳಲ್ಲಿ ಫಲಕ ಹಾಕಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಶುಕ್ರವಾರ ಪೆಟ್ರೋಲ್ ಚಾಲಿತ ಮತ್ತು ಇ-ಆಟೊ ಚಾಲಕರ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದ್ದು, ಇ-ಆಟೋ ಚಾಲಕರು ಮಂಗಳೂರು ಪೊಲೀಸ್ ಆಯುಕ್ತರ ಬಳಿ ನ್ಯಾಯ ಕೋರಿ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ಇ-ಆಟೋ ಚಾಲಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಪಾರ್ಕ್‌ಗಳಿಗೆ ಕೊಂಡೊಯ್ದಾಗ ಅಲ್ಲಿದ್ದ ಕೆಲವು ಪೆಟ್ರೋಲ್ ಚಾಲಿತ ರಿಕ್ಷಾ ಚಾಲಕರು ಪಾರ್ಕಿಂಗ್ ನಡೆಸಲು ಅವಕಾಶ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದು ಚಾಲಕರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು ಎಂದು ಹೇಳಲಾಗಿದೆ. ಬಳಿಕ ಇ ಆಟೋ ಚಾಲಕರು ಆರ್‌ಟಿಒ ಕಚೇರಿ ಬಳಿ ಚರ್ಚಿಸಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಅಹವಾಲು ಸಲ್ಲಿಸಿದರು.
ಇ-ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅನಿಲ್ ಬೋಂದೆಲ್ ಮಾತನಾಡಿ, ಕಷ್ಟಪಟ್ಟು ದುಡಿದು ಹಣ ಪಾವತಿಸಿ ನಾವು ರಿಕ್ಷಾ ಖರೀದಿಸಿದ್ದೇವೆ. ಇ-ಆಟೋ ರಿಕ್ಷಾಗಳಿಗೆ ಸರಕಾರವೂ ಪ್ರೋತ್ಸಾಹ ನೀಡಿದೆ. ಆದರೆ ನಾವು ನಗರದ ಪಾರ್ಕ್‌ಗೆ ಬಂದು ದುಡಿಯಲು ಮುಂದಾದಾಗ ನಮಗೆ ಅವಕಾಶ ಇಲ್ಲ ಎಂಬಂತೆ ಕೆಲವು ಕಡೆ ಪೋಸ್ಟರ್‌ಗಳು ಕಂಡುಬಂತು. ಅದಕ್ಕಾಗಿ ನಾವೀಗ ಪೊಲೀಸ್ ಆಯುಕ್ತರ ಬಳಿ ತೆರಳಿ ಮನವಿ ಸಲ್ಲಿಸಿದ್ದೇವೆ. ಅದರಂತೆ ಇಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ನಗರದಲ್ಲಿ ವಲಯ ಸಂಖ್ಯೆಯನ್ನು ನಮೂದಿಸುವ ಪ್ರಕ್ರಿಯೆ ಒಂದು ವಾರದೊಳಗೆ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ’ ಎಂದು ತಿಳಿಸಿದ್ದಾರೆ.