ಉಜ್ಬೇಕಿಸ್ತಾನ: ಕೆಮ್ಮಿನ ಸಿರಪ್ ಸೇವಿಸಿದ್ದ 18 ಮಕ್ಕಳ ಸಾವಿನ ಪ್ರಕರಣ: ಮೂವರ ಬಂಧನ

ನೊಯ್ಡ,ಮಾ.3: ಕಳೆದ ವರ್ಷ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ಅನ್ನು ತಯಾರಿಸಿದ್ದ ಫಾರ್ಮಾಸ್ಯೂಟಿಕಲ್ ಕಂಪೆನಿಯ ಮೂವರು ಉದ್ಯೋಗಿಗಳನ್ನು ನೊಯ್ಡೋ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೇಂದ್ರೀಯ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO)ನ ಔಷಧಿ ನಿರೀಕ್ಷಕರು ನೀಡಿದ ದೂರಿಗೆ ಸಂಬಂಧಿಸಿ ಮಾರಿಯೊನ್ ಬಯೋಟೆಕ್ ಕಂಪೆನಿಯ ಐವರು ಅಧಿಕಾರಿಗಳ ವಿರುದ್ಧ ಗುರುವಾರ ರಾತ್ರಿ ಎಫ್ಐಆರ್ ದಾಖಲಾಗಿತ್ತು. ಅದರ ಬೆನ್ನಲ್ಲೇ ಈ ಬಂಧನಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಎಫ್ಐಆರ್ ನಲ್ಲಿ ಹೆಸರಿಸಲಾದ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಕಂಪೆನಿಯ ಇತರ ಇಬ್ಬರು ನಿರ್ದೇಶಕರು ತಲೆಮರೆಸಿಕೊಂಡಿದ್ದಾರೆ. ಬಂಧಿತ ಉದ್ಯೋಗಿಗಳನ್ನು ಕಾರ್ಖಾನೆಯ ಕಾರ್ಯಾಚರಣಾ ಮುಖ್ಯಸ್ಥ, ತುಹಿನ್ ಭಟ್ಟಾಚಾರ್ಯ, ಮ್ಯಾನುಫ್ಯಾಕ್ಚರಿಂಗ್ ಕೆಮಿಸ್ಟ್ ಅತುಲ್ ರಾವತ್ ಹಾಗೂ ಅನಾಲಿಟಿಕಲ್ ಕೆಮಿಸ್ಟ್ ಮೂಲ್ ಸಿಂಗ್ ಎಂದು ಗುರುತಿಸಲಾಗಿದೆ.
ಕೇಂದ್ರೀಯ ಹಾಗೂ ಉತ್ತರ ಪ್ರದೇಶದ ರಾಜ್ಯ ಔಷಧಿ ಪ್ರಾಧಿಕಾರದ ಅಧಿಕಾರಿಗಳು ಮಾರಿಯೊನ್ ಬಯೋಟೆಕ್ನ ಔಷಧಿ ಸ್ಯಾಂಪಲ್ಗಳನ್ನು ಪರಿಶೀಲಿಸಿದ್ದು, ಅವುಗಳಲ್ಲಿ 22 ಔಷಧಿಗಳು ಕಲಬೆರಕೆ ಹಾಗೂ ನಕಲಿಯಾಗಿದ್ದು, ಪ್ರಮಾಣಿತ ಮಾನದಂಡವನ್ನು ಹೊಂದಿಲ್ಲವೆಂದು ಹೇಳಿದೆ.